ಮಂಗಳವಾರ, ನವೆಂಬರ್ 17, 2020

ಇರುವಾಗ ಇಲ್ಲದ್ದು!!!?


ಇರುವಾಗ ಇಲ್ಲದ್ದು!!

ಜೀವಿಗಳು ಒಂದಿಲ್ಲೊಂದು ದಿನ ಚಿರ ಮೌನದಲಿ ಪಂಚಭೂತಗಳೊಳಗೆ ಲೀನವಾಗಲೇಬೇಕು.            

ಆಕಸ್ಮಿಕ, ನಿಗದಿತ.... ಹೇಗಿದ್ದರೂ ಸರಿ ಆರೋಗ್ಯ-ಅನಾರೋಗ್ಯದ ಸ್ಥಿತಿಯಲ್ಲಿ ಯಾವುದೇ ಬೇಧವಿಲ್ಲದೆ ಕೊನೆಗೆ ಪವಡಿಸಲೇಬೇಕು.                                      

ದಿಕ್ಕಿಲ್ಲದವರೂ ಸರಿ, ಬಾಂಧವ್ಯಗಳ ಬಂಧನದಲ್ಲಿದ್ದರೂ ಸರಿ ವಯಸ್ಸಿನ ಮಿತಿಯಿಲ್ಲದೆ ಮೌನಲೋಕದೊಳಗೆ ಪ್ರವೇಶಿಸಲೇಕು.                                                

ಧಾರ್ಮಿಕ ನಂಬಿಕೆಯಲ್ಲಿ ಕೊನೆಯಲ್ಲ ಆರಂಭವೆಂದರೂ ಸಹ ಸ್ತಬ್ದತೆಯ ಆಲಿಂಗನದಲಿ ನಿಸ್ತೇಜವಾಗಲೇಕು. 

ಐಷರಾಮಿಯೊಂದಿಗೆ ಏಕಾಂಗಿಯಾದರೂ ಸರಿ, ಪ್ರಕೃತಿ ವಿಕೋಪದಲಿ ಸಿಲುಕಿ ಜೊತೆಜೊತೆಯಾದರೂ ಸರಿ ಕತ್ತಲ ಕೋಣೆಯೊಳಗೆ ಪ್ರವೇಶಿಸಲೇಕು.                        

ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತ್ಯಕ್ಷವಾಗಿ ಕಂಡುಕೊಂಡ ನಿರಾಕರಿಸಲಾಗದ ಶಾಂತ ಸ್ವರೂಪದ ಕಡು ಸತ್ಯವಿದು.

ಧರೆಯೊಳಗೆ ಮರೆಯಾಗಲು ಸಿದ್ದಗೊಂಡಿರುವ ಶರೀರದ ಇರುವಿಕೆಯಲ್ಲಿ ಕಂಡುಕೇಳಿದ ಅನೇಕ ವಿಚಾರಗಳು ನಿಟ್ಟುಸಿರಿನ ಮೂಲಕ ಎಲ್ಲರ ನಾಲಿಗೆಗಳಿಂದ ಶಬ್ದವಾಗಿ ಹೊರಬರುತ್ತಿರುತ್ತದೆ.

ಇತ್ತೀಚೆಗೆ ಅಂತದ್ದೇ ಸಂದರ್ಭದಲ್ಲಿ ನೆಲದೊಳಗೆ ಇಡುತ್ತಿದ್ದ ಪೆಟ್ಟಿಗೆಯನ್ನು ನೋಡಿ ರೋಧಿಸುತ್ತಾ ಆತನ ಪತ್ನಿ,       

"ಕ್ಷಮಿಸಿ ಬಿಡಿ ನನ್ನನ್ನು!  ಬನ್ನಿ ಮನೆಗೆ. ಮತ್ತೆಂದು ನಿಮಗೆ ನೋವು ಕೊಡಲ್ಲ".                                          

ಮತ್ತೊಂದು ಇಂತಹದ್ದೇ ಸಂಕಟದ ದನಿ,  "ಕ್ಷಮಿಸಿ... ತಪ್ಪು ಮಾಡಿಬಿಟ್ಟೆ. ಇನ್ಯಾವತ್ತೂ ನಿಮ್ಮನ್ನ ಬೈಯ್ಯೋದಿಲ್ಲ...." ಇವೆರಡು ಅಗಲಿದ ಪತಿಗೆ ಚಿರಮೌನದ ಕೊನೆ ಗಳಿಗೆಯ ಕ್ಷಮಾಯಾಚನೆ!

ಇಂತಹ ಮಾತುಗಳು, ಅಳು, ರೋಧನೆ, ದುಃಖ, ಪಶ್ಚಾತ್ತಾಪದ ಕೂಗುಗಳ ವಿವಿಧ ತರನಾಗಿ ಕೇಳಿರಬಹುದು!

ಇಂತಹ ಮಾತುಗಳನ್ನು ಕೇಳುವ ಅಲ್ಲಿನ ಪ್ರತ್ಯೇಕ ಸಾಕ್ಷಿಗಳು ತಮ್ಮದೇ ಆದ ವಿಚಾರ ಲಹರಿಗಳನ್ನು ಹರಿಯಬಿಡುತ್ತಾರೆ. ಇರಲಿ.ಮಾನವ ಸಹಜ!!!

ಇಲ್ಲಿ ಉದ್ಭವವಾಗುವುದು ಒಂದೇ ಪ್ರಶ್ನೆ....?!

ಸತ್ಯವನ್ನರಿತ್ತಿದ್ದರೂ, ಎಲ್ಲರಿಗೂ ಜ್ಞಾನವಿದ್ದು ಪರಿವರ್ತನೆಯ ನಿರ್ಧಾರ ಮೂಡಿದ್ದರೂ ಸಹ ಸಂಯಮ ಕಳೆದುಕೊಂಡು ಎಲ್ಲವನ್ನೂ ಮರೆತು ಅಸಾಮಾನ್ಯದಿಂದ ಸಾಮಾನ್ಯ ಸ್ಥಿತಿಗೆ ತಲುಪುತ್ತಾರಲ್ಲ ಯಾಕೆ?!!!

ಅದೇ ದ್ವೇಷ, ಅನುಮಾನ, ಕೋಪ, ಹೀಯಾಳಿಕೆಗಳಂತಹ ಅರ್ಥವಿಲ್ಲದ, ಸಮಾಧಾನ ನೀಡದ ಇಂತಹುಗಳನ್ನೇ ಮತ್ತೆಮತ್ತೆ ಬೆಂಬತ್ತಿ ಹೋಗುವ ಮೂಲ ಕಾರಣವೇನು?

ಕೆಲ ನಿಮಷಗಳ ತಾಳ್ಮೆ, ಕೊಂಚ ಪ್ರೀತಿ, ದೃಢವಾದ ನಂಬಿಕೆ, ಅರ್ಥೈಸಿಕೊಂಡು ಪ್ರಯೋಗಿಸುವ ನಿಖರವಾದ ಹೊಂದಾಣಿಕೆಗಳೊಂದಿಗೆ ತ್ಯಾಗ, ಕ್ಷಮೆಯ ಉದಾರತೆ ಇದ್ದರೆ ಒಳಿತಲ್ಲವೇ?!

ಕಿಡಿ ಹೊತ್ತಿಸಿ ಉರಿದ ಮೇಲೆ ಅದರ ದಟ್ಟಣೆಯ ಹೊಗೆಯೊಳಗೆ ಕಣ್ಣೀರ ಹರಿಸಿದರೆ ಫಲವೇನು ಅಲ್ಲವೆ?!

ಜೀವಂತವಾಗಿ ಇದ್ದರೆ ಜೀವ ಎಂದು ಬೇಕಾದರೂ ಒಂದಾಗಬಲ್ಲದು. ಮಣ್ಣೊಳಗೆ ಮರೆಯಾದ ಮನಸ್ಸು ಮತ್ತೆ ಮಾತಾಡಬಲ್ಲದೇ?! ಹೊಂದಿಕೊಳ್ಳುವ ಮನೋಭಾವನೆಗೆ ಮಾನ್ಯತೆ ಕೊಟ್ಟರೆ ಮನುಷ್ಯತ್ವದ ಮಹಡಿಯಲ್ಲಿ ಮಹರಾಜರಾಗಿ, ಮಹಾರಾಣಿಯಾಗಿ ಮೆರೆದಾಡಬಹುದಲ್ಲ!!?

ಮನಸಾಕ್ಷಿಯ ಮಧುರ ಬಾಂಧವ್ಯವನ್ನು ಬಳಸಿಕೊಳ್ಳೋಣ....


: ರಾಬರ್ಟ್ ಇ. ಕವನ್ರಾಗ್,  ಮೈಸೂರು :"

ಮಂಗಳವಾರ, ಅಕ್ಟೋಬರ್ 13, 2020

 'ನೆನಪುಗಳ ಮಡಿಲಿನಲಿ ಪಿಸುಮಾತುಗಳು!'



ಆ ಕ್ಷಣಗಳು ಮತ್ತೆ ಬರುತ್ತವೆಯೇ ಎಂಬ ಸವಿಯ ಬಯಸುವ ಮಿಡಿತಗಳು ಅನೇಕ.
ಆ ಆತಂಕಕಾರಿ ಗಳಿಗೆಯು ವೈರಿಗೂ ಬಾರದಿರಲಿ ಎಂಬ ತುಡಿತಗಳು ಅಂಕೆಗೆ ಸಿಗದಷ್ಟು ಅಪಾರ.
ಜೀವನದಲಿ ಮುಟ್ಟಿ ಬಂದ ಅನುಭವಗಳು ನೆನಪುಗಳ ಸರಪಳಿಯಾಗಿಯೋ ಅಥವಾ ಚೆಂದದ ಮಣಿಮಾಲೆಗಳಾಗಿಯೂ ಕೊರಳಲಿ ಸದಾ ತೂಗುತ್ತಿರುತ್ತವೆ.
ಕೊರಗುತ್ತಾ ಸೊರಗುವ ಮನಸ್ಸುಗಳೊಂದಿಗೆ, ಸುಖದ ಸವಿಯಲ್ಲಿ ಆನಂದಿಸುವ ಹೃದಯವು ಭುಜದ ಮೇಲೆ ಕೈಹಾಕಿ ಹೆಜ್ಜೆ ಹಾಕುತ್ತವೆ.
ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿದಿನದ ಗಂಟೆಯಲ್ಲೂ ನೆನಪುಗಳ ಕಂಪನದಲಿ ಅನುಮಾನದಲ್ಲಿಯೆ ಸಂಚರಿಸುತ್ತಾನೆ.
ನೋವಿರಲಿ ನಲಿವಿರಲಿ ತನ್ನೊಳಗಿನ ಬದುಕಿನ ಚಿತ್ರಣಗಳನ್ನು ಇತರರ ಮನದ ಪರದೆಗಳ ಮೇಲೆ ರೂಪಿಸಲು ತವಕಿಸುತ್ತಲೇ ಇರುತ್ತಾನೆ.
ಆನಂದಬಾಷ್ಪ ಚಿಮ್ಮಿಸುವ ಘಟನೆಗಳನ್ನು ಅಪ್ಪುಗೆಯಲ್ಲಿ ಚಿತ್ರಿಸಿದರೆ, ಮರುಗುವ ಕಣ್ಣೀರಿನ ಮಂಜಾಗಿಸುವ ಅನುಭವಗಳನ್ನು ಮಡಿಲಿನ ಮಡಿಕೆಯೊಳಗೆ ಅವಿತ್ತಿಡಲು ತವಕಿಸುತ್ತಾನೆ.
ಅನುಭವಗಳ ಅನುಬಂಧಿತಗಳಿಂದ ಮೂಡುವ ಅಕ್ಷರಗಳ ಪದಪುಂಜಗಳನ್ನು ಪ್ರೀತಿಸುವರೊಂದಿಗೆ, ಪ್ರೇಮದಲಿ ಮುತ್ತಿಡುವವರೊಂದಿಗೆ, ಒಲವಿನ ಬಾಂಧವ್ಯಗಳೊಂದಿಗೆ ಪೇರಿಸಿಟ್ಟು ನೆಮ್ಮದಿಯಲ್ಲಿ ಪವಡಿಸುವವರು ನಿಟ್ಟಿಸಿರು ಬಿಡುತ್ತಾರೆ.
ಇಂತಹದ್ದೇ ಪದಪುಂಜಗಳನ್ನುಕೇಳುವವರು ಕಾಣದಿದ್ದಾಗ ಅದೇ ಕೊರಗಿನಲ್ಲಿ ಅನೇಕರು ಅಸಹನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ದುಃಖಿಸುತ್ತಾರೆ.
ಇವರು ತಮ್ಮ ಅಂತಿಮ ಬದುಕಿನ ದಿನಗಳನ್ನು ಏಕಾಂತದಲ್ಲಿ ಪೇಚಾಡುತ್ತಲೇ ಕಳೆಯುತ್ತಾರೆ. ಕೊನೆಗಾಲದಲ್ಲಾದರೂ ನೆನಪುಗಳ ಮಡಿಲಿನಲಿ ಪಿಸುಮಾತುಗಳನ್ನು ಆಲಿಸುವ ಅವಕಾಶ ದೊರಕಲಿ ಎಂಬ ಆಶಾಭಾವದಿಂದ ದಿನವನ್ನು ದೂಡುತ್ತಾರೆ.
ಅನೇಕರು ಹುಚ್ಚರಂತೆ ನೆಮ್ಮದಿಯನ್ನು ಹುಡುಕಿ ಹೋಗುವುದು ಈ ಕಾರಣದಿಂದಲೇ!
ಅನೇಕ ಬಾರಿ ಇಂತವರು ಶೂನ್ಯತೆಯಲ್ಲಿ ಖಿನ್ನರಾಗುವರು. ತಮ್ಮನ್ನೇ ಕಳೆದುಕೊಳ್ಳುತ್ತಾರೆ.
ಇದಕ್ಕೆ ಸಿಲುಕಬಾರದೆಂದರೆ ಅವರಿಗೆ,
* ಪ್ರೇಮಿಸುವ ಸಂಗಾತಿ ಇರಬೇಕು.
* ಪ್ರೀತಿಸುವ ಒಡಹುಟ್ಟಿದವರು, ಬಂಧುಬಳಗವಿರಬೇಕು.
* ಒಲವಿನ ಗೆಳೆತನದ ಪ್ರತ್ಯಕ್ಷ ಬೆನ್ನೆಲುಬಿರಬೇಕು.
* ಆತ್ಮೀಯತೆಯಲ್ಲಿ ಅಪ್ಪುವ ಪರಿಚಿತರಿರಬೇಕು.
* ಪ್ರೇರಣೆಯ ನಿಸ್ವಾರ್ಥ ನಗುವಿನ ಸಹಪಾಠಿ ಸಹೋದ್ಯೋಗಿಗಳಿರಬೇಕು.
* ಸಹಕರಿಸುವ ಉದಾರ ಹೃದಯವಂತರಿರಬೇಕು.
ಇವೆಲ್ಲವನೂ ಒಟ್ಟಿಗೆ ಪಡೆಯಲು ಅಸಾಧ್ಯವೆನಿಸಿದರೂ ಇದರಲ್ಲಿ ಒಂದಾದರು ಸಿಗುವಂತಿರಬೇಕು.
ಒಂದು ವೇಳೆ ಇದ್ಯಾವುದು ನಮ್ಮ ಹತ್ತಿರ ಬರದಿದ್ದಾಗ ಇವುಗಳನ್ನೆಲ್ಲವನ್ನೂ ಮೀರಿಸುವ ಪ್ರಭುವಿನ ಕರುಣೆಯ ಕರಗಳಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿರಬೇಕು.
ಪ್ರಭುವಿನಲ್ಲಿ ನಂಬಿಕೆಯಿರಬೇಕು.
ಆಗ ಮಮತೆಯ ತಾಯಿಯ ಮಡಿಲನ್ನೂ ಮೀರಿಸುವ ದೈವತ್ವ ಸಮಾಧಾನದ ಮಡಿಲಿನಲಿ
ನೆನಪುಗಳ ಸವಿ ಮಾತುಗಳನ್ನಾಡುವ ಮಹಾ ಭಾಗ್ಯ ನಮಗೆ ದೊರಕುತ್ತದೆ.


- ರಾಬರ್ಟ್ ಕವನ್ರಾಗ್, ಮೈಸೂರು -

   *ತಿರುಗೊ ಭೂಮಿಯಲಿ ಬದಲಾವಣೆ ಸಹಜ ಪ್ರಕ್ರಿಯೆ*

ಮುದುಡಿದ ಹೂಗಳೆಲ್ಲವೂ ಸೋಲನ್ನು ಅನುಭವಿಸಿ ಸೊರಗಿದೆ ಎನ್ನುವುದು ಖಂಡಿತ ಮೂರ್ಖತನ. ಬರಿದಾದ ಜೇನುಗೂಡಿನ ಮೇಣವು ಪ್ರಯೋಜನವಿಲ್ಲದ ಕಸದ ಗೂಡು ಎಂದು ಅಲ್ಲಗಳೆಯುವುದು ಅಜ್ಞಾನದ ದುಸ್ಥಿತಿ. ಹಾಗೆಯೇ ದುಃಖದಲ್ಲಿ ಮುಳುಗಿರುವ, ಬಡತನದಲ್ಲಿ ನಲುಗಿರುವ, ತಾನು ಯೋಗ್ಯನಲ್ಲ ಎನ್ನುವವರೆಲ್ಲಾ ಯಾವುದಕ್ಕೂ ಬಾರದವರೆಂದು ತಿರಸ್ಕಾರದಿಂದ ನೋಡುವುದು ತರವಲ್ಲ. ಅಜಾನುಬಾಹು ವ್ಯಕ್ತಿಗಳೇ ಆಗಲಿ, ಹೆಳವನೇ ಆಗಲಿ ಒಬ್ಬರಿಗೊಬ್ಬರನ್ನು ಹೋಲಿಸಿ ಅವರ ಅರ್ಹತೆಯನ್ನು ಪ್ರಕಟಪಡಿಸಲು ಅಸಾಧ್ಯ.

ಇಂದಿನ ವೈಜ್ಞಾನಿಕತೆಯ ವೇಗದ ಬದುಕಿಗೆ ಸರಿಗಟ್ಟಿ ನಿಲ್ಲಲ್ಲು ಮಾನವರಾದ ನಾವು ಮಿತಿಮೀರಿ ಸಾಹಸ ಪಡಬೇಕಾಗಿದೆ. ವ್ಯತಿರಿಕ್ತವಾಗಿ ಸಮಾಜದಲ್ಲಿ ಸಮಂಜಸವಲ್ಲದ ವಿಚಾರಗಳು ಗೋಚರಿಸುತ್ತಿವೆ.
ಈತ ಏನು ಬೇಕಾದರೂ ಸಾಧಿಸಬಲ್ಲ, ಮಾಡಬಲ್ಲ ಎಂದು ಕೆಲ ವ್ಯಕ್ತಿಗಳನ್ನು ನೋಡಿದಾಗ ಅನ್ನಿಸುತ್ತದೆ. ಆದರೆ ಅಂತಹವರ ಗುಣ, ನಡತೆ, ಬದುಕಿನ ಬಗ್ಗೆ ತಿಳಿದುಕೊಳ್ಳಲು ಹೋದಾಗ ವಿಚಿತ್ರ ಅನ್ನಿಸುತ್ತದೆ. ಕೆಲವೊಮ್ಮೆ ನೋವು, ಸಂಕಟ, ಕೋಪವೂ ಕಾಣಿಸಿಕೊಳ್ಳುತ್ತದೆ.
ಏಕೆಂದರೆ ಅವರು ಸೋಂಬೇರಿ, ಸ್ವಾರ್ಥಿ, ಭಯ, ಕೀಳರಿಮೆಗಳಿಂದ ತುಂಬಿದವರಾಗಿ ಬದುಕಿನಲ್ಲಿ ಯಶಸ್ಸನ್ನು ಕಾಣದಿರುತ್ತಾರೆ.
ಅಂಗವಿಕಲಕರು, ದೀನರು, ಬಡವರು, ನೊಂದವರು, ಕುರೂಪಿಗಳು, ಅಸಡ್ಡೆಗೆ ಒಳಗಾದವರು ನಮ್ಮ ನಡುವೆ ಅನೇಕರಿದ್ದಾರೆ.
ಅವರಲ್ಲಿ ಅನೇಕರು ಯಾರಿಗೂ ಅವಲಂಬಿತರಾಗದೆ ತಮ್ಮ ಮೇಲೆ ಅಪಾರವಾದ ನಂಬಿಕೆ ಇಟ್ಟಿರುತ್ತಾರೆ. ತಮ್ಮಲ್ಲಿರುವ ಹೀನತೆಯನ್ನು ಮರೆತು ಸ್ವಾಭಿಮಾನಿಗಳಾಗಿ ಧನಾತ್ಮಕ ಚಿಂತನೆಗಳಿಂದ ಬದುಕಲು ಪ್ರಯತ್ನಿಸುತ್ತಾರೆ.
ಸಾಮಾನ್ಯ ವ್ಯಕ್ತಿಗಳು ಸಾಧಿಸಲಾರದನ್ನು ಇಂತವರು ಸಾಧಿಸಲು ಶ್ರಮಿಸಿತ್ತಾರೆ.
ಸಾಧಿಸಿ ತೋರಿಸುತ್ತಾರೆ.
ರಾಜಕೀಯ ರಂಗದಲ್ಲೇ ಆಗಲಿ, ಸಿನಿಮಾರಂಗದಲ್ಲಿಯೇ ಆಗಲಿ, ಕಲಾರಂಗದಲ್ಲೇ ಆಗಲಿ, ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲೇ ಆಗಲಿ, ಧಾರ್ಮಿಕ ಕ್ಷೇತ್ರಗಳಲ್ಲೇ ಆಗಲಿ.... ಬುದ್ಧಿವಂತರು, ರೂಪವಂತರು, ಶಕ್ತಿವಂತರು ಮಾತ್ರವೇ ಇದ್ದಾರೆಯೇ? ಯೋಗ್ಯತೆಯೇ ಇಲ್ಲ ಎನ್ನುವವರೂ ತಾರೆಗಳಂತೆ ಮಿನುಗುತ್ತಿದ್ದಾರೆ.
ಅಂದರೆ ಪ್ರತಿಭೆ, ಚಾಣಾಕ್ಷತೆ,‌ ಶ್ರದ್ದೆ, ಶ್ರಮ, ಏಕಾಗ್ರತೆ, ಛಲ, ಪ್ರಾಮಾಣಿಕ ಪ್ರಯತ್ನಗಳು ಸಮಾಜದಲ್ಲಿ ಎಂತಹ ವ್ಯಕ್ತಿಯನ್ನೇ ಆಗಲಿ ಒಂದು ಉತ್ತುಂಗ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಧರೆಯು ಸದಾ ತಿರುಗುತ್ತಾ ಅನೇಕ ಮಾರ್ಪಾಡಿಗೆ ಕಾರಣವಾಗುವಂತೆ ನಾವೂ ಸಹ ಸದಾ ಚಲನೆಯಲ್ಲಿದ್ದರೆ ಯಶಸ್ಸಿನ ಮೇಲ್ಮಟ್ಟಕ್ಕೆ ತಲುಪಬಹುದು.
ದೇವರ ಅನುಗ್ರಹ ಸದಾ ಇದೆ.


- ರಾಬರ್ಟ್ ಕವನ್ರಾಗ್, ಮೈಸೂರು -

.....ಕರ್ತವ್ಯ - ಮಮತೆ.....

 :"ಪ್ರಥಮ-ಪೂರ್ಣ" ನಡುವಿನ ಸಂಧಾನ:



ಅದೊಂದು ಕೊನೆಯುಸಿರು ಇರುವವರೆಗೂ ಕಣ್ಣೆದುರು ಕಾಣುವ ಘಟನೆ.
ಮೂವತ್ತು ವರ್ಷಗಳ ಹಿಂದೆ ಬಯಸದೇ ಬಂದ ಭಾಗ್ಯದಂತೆ ಕ್ರೈಸ್ತ ಭಕ್ತಿಗೀತೆಗಳ ಸಾಹಿತ್ಯ-ಸಂಗೀತ-ಗಾಯಕನಾಗಿ ಧ್ವನಿಮುದ್ರಣದ ಸೇವೆಗೆ ಅವಕಾಶ ದೊರೆತ ರೋಮಾಂಚನದ ಸಮಯ.
ಇದರಿಂದ ಮುಂದೆ ಗಳಿಸಬಹುದಾದ ಕೀರ್ತಿಯೊಂದಿಗೆ ಬರಬಹುದಾದ ಎಲ್ಲದರ ಕಲ್ಪನೆಯ ಕನಸೊತ್ತುಕೊಂಡು ಸಿದ್ಧವಾಗಿದ್ದೆ. ಮನದೊಳಗೆ ಹಗುರವಾದ ಸಂಚಾರವಿತ್ತು.
ಆದರೆ ಹೊರಡುವಾಗ ಮನೆಯೊಳಗೆ ಭಾರದ ನೋಟಗಳ ಮುಜುಗರವಿತ್ತು. ಈಗ ಈತ ಹೋಗಲೇಬೇಕಾ? ಎಂಬ ಪ್ರಶ್ನೆಯನ್ನು ಕೇಳುತ್ತಿರುವಂತಹ ಬೀಳ್ಕೊಡುಗೆ ಇತ್ತು. ನನ್ನಲ್ಲು ಕನಸಿಗಿಂತ ಬಿಟ್ಟು ಹೋಗಬಹುದೆಂಬ ಕಸಿವಿಸಿಯ ಹಿಂಸೆ ಮುಳ್ಳಾಗಿ ತೊಡರುತಿತ್ತು.
ಕಾರಣ ನನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದ, ನನ್ನ ಚಟುವಟಿಕೆಗಳ ಬಗ್ಗೆ ಹೆಮ್ಮೆ ಪಡುತ್ತಿದ್ದ, ನನ್ನನ್ನು ಯಾವಾಗಲೂ ತನ್ನ ನಂಬಿಕೆಯಲ್ಲಿ ಬಂಧಿಸಿಕೊಂಡಿದ್ದ ನನ್ನ ಸುಮಾರು 104 ವಯಸ್ಸಿನ ಮುದ್ದು ಅಜ್ಜಿ ಈ ಲೋಕವನ್ನು ಬಿಟ್ಟು ಹೋಗಲು 😔 ಸಿದ್ಧವಾಗಿದ್ಧರು.
ಇತ್ತ ಆರಂಭವಾದ ಕನಸಿನ ಸವಿ. ಅಲ್ಲಿ ಕೊನೆಗೊಳ್ಳುತ್ತಿದ್ದ ಉಸಿರಿನ ಗವಿ.
ನಾನು ಕತ್ತರಿಯಲ್ಲಿ ಸಿಕ್ಕಿಕೊಂಡಿರಲಿಲ್ಲ. ಬದಲಾಗಿ ಕತ್ತಲಲ್ಲಿ ಸೆಳೆದು ಗೀಳಿಡುವ ಕ್ರೂರತೆಯ ಮಂದಗತಿ.
ಸಂಕಟ-ಸಂತಸಗಳ ನಡುವೆ ಅವಿತುಕೊಂಡ ಹೃದಯದ ಬಡಿತ ಮೌನ ನಿರ್ಧಾರದ ಕಣ್ಣೀರಿಗೂ ಅವಕಾಶ ನೀಡದೆ ಸುಮ್ಮನ್ನಿತ್ತು.
ಅಳಲು ಆನಂದ ಬಿಡದು, ನಗುವುದಕ್ಕೆ ನೋವು ಬಿಡುತ್ತಿಲ್ಲ.
ಭಾರವಾಗಿದ್ದರೂ ಚಂದಿರನ ಮೇಲೆ ಮುಂದಡಿಯಿಡುವ ಸ್ಥಿತಿಯಂತೆ ಮುದುಡಿ ಮಲಗಿದ್ದ ಸ್ತಬ್ದತೆಯೆಡೆಗೆ ಪಯಣಿಸುತ್ತಿದ್ದ ದೇಹವನ್ನು ಸ್ಪರ್ಶಿಸಿ, ಹೊರ ಅಡಿ ಇಟ್ಟಾಯ್ತು.
ಮುಂದೆ......!?
ಇಂತಹ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರ ಬಹು ಕಠಿಣ.
ಕರ್ತವ್ಯದೆಡೆ ಹೋಗದಿದ್ದರೆ ಅಗತ್ಯತೆ ಬಯಸುವವರು ವಿರುದ್ಧವಾಗಬಹುದು.
ಮಮತೆಯೆಡೆ ನೋಟ ಹರಿಸದಿದ್ದರೆ ಕಲ್ಲು ಹೃದಯದ ಅಸಹ್ಯ ಜೀವಿ‌ ಎಂದು ಕರೆಸಿಕೊಳ್ಳುವ ಅವಮಾನ.
ಆರಂಭವಾಗಬೇಕಾಗಿರುವುದು, ಅಂತ್ಯಗೊಳ್ಳುವುದು ಬದಲಾಗಬಹುದು, ತಡವಾಗಬಹುದು.
ಆದರೆ ಇಂತಹ ಸಮಯದಲ್ಲಿ ಯಾವುದನ್ನೂ ಬಿಟ್ಟುಗೊಡದೆ ಸಮತೋಲನ ಸ್ಥಿತಿಗೆ ತರುವುದು ಪ್ರಸ್ತುತತೆಗೆ ಅರ್ಥ ಕೊಡುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತೊಳಲಾಡುವ ಅನುಭವ ಎಲ್ಲರಿಗೂ ಇದೆ.
ಬರಲಿರುವ ವೇದನೆಯನ್ನು ನೆನೆದು ರಕ್ತದ ಬೆವರನ್ನು ಸುರಿಸುತ್ತಾ ದೇವರಲ್ಲಿ ಯಾಚಿಸಿದ ಪ್ರಭುವಿನ ಮನಸ್ಥಿತಿ ಹೇಗಿದ್ದಿರಬಹುದು???!
ಅಂತರಾತ್ಮದ ಮಾತಿಗೆ ಕಿವಿಗೊಡುವವನಿಗೆ ಪ್ರಭುವು ಸೂಕ್ತವಾದ ತಿಳುವಳಿಕೆ ನೀಡಬಲ್ಲರು.
ಕರ್ತವ್ಯ - ಮಮತೆ ಯಾವುದನ್ನೂ ಕಳೆದುಕೊಳ್ಳಲು ಬಿಡರು.
ಅಜ್ಜಿ ಅದೇ ದಿನ ಇಹಲೋಕ ತ್ಯಜಿಸಿದರು. ಅವರು ಮೌನದಲ್ಲಿ ಇರುವಾಗಲೇ ನನ್ನ ದನಿಯು ಪ್ರಭುವನ್ನು ಹಾಡಿ ಮಹಿಮೆಪಡಿಸಿದ್ದು ಮುದ್ರಣಗೊಂಡು ದಾಖಲೆಯಾಗಿದೆ.
ಆದರೆ ಆ ಕಹಿಸಿಹಿ ಎರಡನ್ನೂ ಕಂಡಿದ್ದೇನೆ. ನೆನಪಿನಲ್ಲಿ ಉಳಿಸಿಕೊಂಡಿದ್ದೇನೆ.
ಅದರಿಂದ ಶ್ರೇಷ್ಟ ಪಾಠವನ್ನು ಕಲಿತ್ತಿದ್ದೇನೆ. ಹೇಗೆಂದರೆ ಪ್ರಥಮ-ಪರಿಪೂರ್ಣತೆ ನಡುವಿನ ಸಂಬಂಧದಲ್ಲಿ ಸಂಧಾನ ಮಾಡಿಕೊಂಡಿದ್ದೇನೆ. ಕೆಲವೊಮ್ಮೆ ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಕಿವಿಗೊಡಬಾರದು.‌
ಬೇರು ಧರೆಯಲ್ಲಿ, ಕೊಂಬೆಗಳು ಹೊರಪ್ರಪಂಚದಲ್ಲಿ ತನ್ನನ್ನು ತಾನೂ ಬೆಳೆಯಗೊಡುವಂತೆ ನಾವು ಬೆಳೆಯಬೇಕು.

- ರಾಬರ್ಟ್ ಕವನ್ರಾಗ್, ಮೈಸೂರು -


 

ಬುಧವಾರ, ಸೆಪ್ಟೆಂಬರ್ 9, 2020

*ಸಮಚಿತ್ತದ ಸಮನ್ವಯ ಸ್ಥಿತಿ*



ಜಾತಿ, ಮತ, ಕುಲ, ಪಂಗಡಗಳೆಲ್ಲವನ್ನೂ ಬದಿಗಿಟ್ಟು ಒಮ್ಮೆ ಸಾವಧಾನವಾಗಿ ಯೋಚಿಸೋಣ.
ನಮ್ಮ ಈ ಗಳಿಗೆಯ ಸ್ಥಿತಿ ಹೇಗಿದೆ? ಯಾವ ಉದ್ದೇಶಕ್ಕಾಗಿ ನಾವು ಪ್ರಾರ್ಥನೆ, ಪೂಜೆಪುನಸ್ಕಾರ, ಆಚಾರವಿಚಾರ, ಸದ್ಗುಣ ಪಾಲನೆ, ನೀತಿನಿಯಮಗಳ ಅಂತರ್ ಪ್ರಯಾಣ, ತ್ಯಾಗಸೇವೆಗಳ ಸಂಸರ್ಗ, ಸದ್ಗತಿಯ ಚಿಂತನೆಗಳಂತಹ ಈ ಲೋಕಕ್ಕೆ ನಿಷ್ಠೂರವಾದ ಕಾರ್ಯಗಳನ್ನು ಕೆಲವರು ಕೈಗೊಳ್ಳುವುದೇಕೆ?
ಮೈಮನಗಳನ್ನು ದಂಡಿಸಿಕೊಂಡು ಬದುಕಿದರೆ ಅದರಿಂದಾಗುವ ಒಳಿತಾದರೂ ಏನು?!
ಸುಖ-ಸಂತೋಷ-ನೆಮ್ಮದಿಯನ್ನು ತೊರೆದು ಬಾಳುವುದರಿಂದ ಸಾಧಿಸುವುದಾದರೂ ಏನನ್ನು?
ಸತ್ತ ಮೇಲೆ ಏನಾಗುತ್ತೇವೆ ಎಂಬ ಸತ್ಯ ನಿಜವಾಗಲೂ ಯಾರಾದರೂ ಕಂಡಿದ್ದಾರೆಯೇ? ಹೇಳಿದ್ದಾರೆಯೇ?
ಸತ್ತವರು ನಮಗಾಗಿ ದೇವರಿಂದ ನಮ್ಮ ಅಗತ್ಯಗಳನ್ನು ಬೇಡಿ ಕೊಡುತ್ತಾರೆ ಎಂದು ತಿಥಿ, ಸ್ಮರಣೆಗಳನ್ನು ಮಾಡುವುದಾದರೆ ಯಾವ ರೀತಿ? ಸತ್ತವರಿಂದ ಎಲ್ಲವೂ ಸಾಧ್ಯ ಎಂದ ಮೇಲೆ ಮಹಾತ್ಮರ, ಪುಣ್ಯಪುರುಷರ, ನ್ಯಾಯನೀತಿಗಾಗಿ ಪ್ರಾಣತ್ಯಾಗ ಮಾಡಿದ.... ಆತ್ಮಗಳು ಏನು ಮಾಡುತ್ತಿವೆ. ಇಂತಹ ಚಿಂತನೆಗಳು ಕಾಡಿಸುವುದು ಸಹಜ.
ಆದರೂ ಅಂತಹ ಪ್ರಶ್ನೆಗಳನ್ನು ಅವಿತ್ತಿಟ್ಟು ದೇವರು, ಧರ್ಮ, ಧರ್ಮಗಳ ಕಟ್ಟುನಿಟ್ಟಿನ ಪಾಲನೆ, ಮುಕ್ತಿಯ ಅಭಿಲಾಷೆ, ಭಯಭಕ್ತಿಗಳ ನಿಮಿತ್ತ ಉತ್ತರ ಕಂಡುಕೊಳ್ಳಲಾಗದೆ ಕೊನೆಯುಸಿರಿನವರೆಗೂ ಬದುಕು ಸಾಗಿಸುತ್ತೇವೆ. ಪವಿತ್ರಗ್ರಂಥ, ಬೋಧನೆಗಳ ಮೇಲಿನ ಅಚಲ ವಿಶ್ವಾಸದಿಂದ ಅಗೋಚರ ದೈವತ್ವದ ಸ್ಪರ್ಶದಲ್ಲಿ ಒಂದಾಗಲು ಬಯಸುತ್ತೇವೆ.
ಏಕಾಂತದಲ್ಲಿ ಕುಳಿತು ಪ್ರಸ್ತುತವನ್ನು ಮಾತ್ರ ಚಿಂತಿಸಿದರೆ ಕೆಲವೊಮ್ಮೆ ಎಲ್ಲವೂ ನಾಟಕೀಯವಾಗಿ ಭಾಸವಾಗುತ್ತವೆ. ಏಕೆಂದರೆ ಬದುಕು ದಾರಿ ನಮ್ಮ ಇಷ್ಟಕ್ಕೆ ತದ್ವಿರೋಧವಾಗಿರುತ್ತದೆ.
ನೈಜ ಪ್ರೀತಿಯನ್ನು ತೋರಿಸಿರುವುದಿಲ್ಲ. ಕ್ಷಮಿಸುವ ಮನಸ್ಥಿತಿ ಇರೋದಿಲ್ಲ. ಸಿರಿತನ, ಕೀರ್ತಿ, ಪ್ರತಿಷ್ಟೆಗಳ ಬಾಲ ಹಿಡಿದಿರುತ್ತೇವೆ.
ಅಂತರಂಗದ ಮಾತಿಗೆ ಕಿವಿಗೊಟ್ಟಿರುವುದಿಲ್ಲ.
ನಮ್ಮನ್ನು ನಾವು ಹೆಚ್ಚಿಸಿಕೊಳ್ಳುವುದರಲ್ಲೇ ಬಾಳ ಹಾದಿಯನ್ನು ಸವೆಸಿರುತ್ತೇವೆ.
ಧರ್ಮ ಬೋಧಿಸುವುದು ಲೋಕದಲ್ಲಿ ಎಲ್ಲರೂ ದೇವರ ಮಕ್ಕಳು.
ಸಮಾನತೆ-ಸಮಾಧಾನ-ಸಂತೋಷ. ಇಷ್ಟನ್ನು ಬಿಟ್ಟು ಬೇರೆ ಏನೇ ಪುಣ್ಯಕಾರ್ಯಗಳನ್ನು ಮಾಡಿದರು, ಗ್ರಂಥಗಳನ್ನು ಓದಿ, ಬೋಧಿಸಿದರೂ ಅವೆಲ್ಲವೂ ಬಹುಶಃ ನಿಷ್ಪ್ರಯೋಜಕವೆಂಬುದು ಎಲ್ಲರಿಗೂ ಅರಿವಿದೆ.
ಈ ಅರಿವಿನ ಅಳತೆಯಲ್ಲಿ ಅಗೋಚರ ಅಂತರಾತ್ಮನ ಅನುಗ್ರಹದಲ್ಲಿ ಅನುರಾಗದ ಸೆಲೆಯಾಗಿರಲು ಪ್ರಯತ್ನಿಸೋಣ.
ಆಂತರ್ಯದಿಂದ ಎಲ್ಲರೊಂದಿಗೆ ಸಮಾನತೆಯಲ್ಲಿ ಬಾಳಿ ನಿಜ ಮನುಷ್ಯರಾಗೋಣ.
'ನಿನ್ನಂತೆಯೆ ನೆರೆಹೊರೆಯವರನ್ನು ಪ್ರೀತಿಸು" ಎಂದು ಪ್ರಭು ಹೇಳಿದ್ದು ಇದಕ್ಕೆ ಇರಬಹುದು!

- ರಾಬರ್ಟ್ ಕವನ್ರಾಗ್, ಮೈಸೂರು-

 'ನಾಳೆ ಎನುವುದು ಇರುವುದೇ?!'

ಕೇರಳ, ಮಡಿಕೇರಿಗಳಿಗಿಂತಲೂ ಹೆಚ್ಚಿನ ಅನಾಹುತಗಳನ್ನು ಸೃಷ್ಟಿಸಿದ, ಸೃಷ್ಟಿಸುತ್ತಿರುವ ಅತಿವೃಷ್ಟಿ, ಜಲಪ್ರಳಯದ ಪರಿಣಾಮಗಳನ್ನು ನೋಡಿದ್ದೇವೆ.
ಒಂದು ಕಡೆ ಮುಗಿಯಿತು ಎನ್ನುವಾಗಲೇ ಮತ್ತೊಂದು ಕಡೆ ಅದರ ಧರೆಯ ಶುದ್ದಿಕರಣ ಕರ್ತವ್ಯ ಆರಂಭವಾಗಿರುತ್ತದೆ.
ಎಷ್ಟರಮಟ್ಟಿಗೆ ಧರೆಯು ತನ್ನನ್ನು ತಾನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೋ ಅದಕ್ಕಿಂತಲೂ ಅಧಿಕವಾಗಿ ಮಾನವ ತನ್ನಳಿವನ್ನು ತಾನೇ ದೃಢಪಡಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದ್ದಾನೆ.
ಇಂದಿನ ಸೂಕ್ಷ್ಮವಾದ ತೀವ್ರತರವಾದ ಬದಲಾವಣೆಯ ಯುಗದಲ್ಲಿ ಈ ಕ್ಷಣವೇ ಕೊನೆಯಾಗಿರಬಹುದೆಂದು ಆತನಿಗೆ ಗೊತ್ತಿದೆ.
ಇದನ್ನೂ ಕಡೆಗಣಿಸಿ ಬಿಗಿ ಬಂಧನದ ತಿಳಿಯಾದ ಮುಖ ಚಹರೆಯಲ್ಲಿ ಈ ಕ್ಷಣವಿದ್ದು ಮುಂದಿನ ಯುಗಗಳ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ.
ತನ್ನನ್ನು ತಾನು ಹೆಚ್ಚಿಸಿಕೊಂಡು ತನ್ನಿಂದಲೇ ಎಲ್ಲವೂ ಎಂಬಂತೆ ತೋರ್ಪಡಿಸುವ ಕಾರ್ಯಗಳಲ್ಲು ನಿರತನಾಗಿದ್ದಾನೆ.
ಅದರೆ ಆತನಿಗೆ ಗೊತ್ತು ತನ್ನಿಂದೆಲ್ಲವನ್ನೂ ಮಾಡಲು ಅಸಾಧ್ಯವೆಂದು!
ಆತ್ಮೀಕತೆ, ಸಾಮಾಜಿಕ, ದೈಹಿಕ, ಮಾನಸಿಕ ಸ್ವಸ್ಥತೆಗಳ ಎಲ್ಲಾ ಒಂದಿಲ್ಲೊಂದು ವಿಷಯಗಳಲ್ಲಿ ಪರಿಣತಿಯನ್ನು ಪಡೆದಿದ್ದರೂ ಅದರ ಪಾಲನೆಯಲ್ಲಿ ಅಪೂರ್ಣನಾಗಿ ಸೋಲನ್ನೊಪ್ಪಿಕೊಳ್ಳದೆಯೇ ಗೆಲುವನ್ನು ಸಾಧಿಸಿದ್ದೇನೆಂದು ಬೀಗುತ್ತಿದ್ದಾನೆ.
ವೈಜ್ಞಾನಿಕತೆಯ ಅಪರಿಮಿತ ವೇಗವು ಆತನನ್ನು ಅರಿವಿಲ್ಲದಂತೆ ಇಂಧನರಹಿತ ವಾಹನದಂತೆ ನಿಂತಲ್ಲೇ ನಿಲ್ಲಿಸಿಬಿಟ್ಟಿದೆ.
ದೇಹದಲ್ಲಿ ಹೋಗಲಾಡಿಸದ ಬಾಧೆಗಳನ್ನೂ ಸಹಿಸಿ ಭಾರವಾದ ಹೆಜ್ಜೆಗಳನ್ನು ಪ್ರತಿ ಕ್ಷಣಗಳಲ್ಲೂ ಇಡುತ್ತಿದ್ದಾನೆ.
ಉದ್ದೇಶವನ್ನೇ ಸ್ಪಷ್ಟವಾಗಿ ಮನನ ಮಾಡಿಕೊಳ್ಳದೆ. ಮಾಡಿಕೊಂಡ ಅಸ್ಪಷ್ಟ ನಿರ್ಧಾರಗಳತ್ತ ನಿರ್ಲಿಪ್ತನಾಗಿ ಸರಿಯುತ್ತಿದ್ದಾನೆ.
ಕಾಲ ಅವನ ಹಿಡಿತದಲ್ಲಿಲ್ಲದಿದ್ದರೂ ಕಾಲವನ್ನು ಕಾಣುತ್ತಾನೆ. ಅಂತರಾಳ ಅಂಕೆಯಿಲ್ಲದೆ ಅಲೆಯುತ್ತಿದ್ದರೂ ಅಲುಗದ ಅಚಲನೆಂದುಕೊಂಡಿದ್ದಾನೆ. ಮುಂದಿನ ಕ್ಷಣ ತನ್ನದ್ದಲ್ಲವೆಂದುಕೊಂಡಿದ್ದರೂ ತನ್ನ ಮುಂದಿನದೆಲ್ಲವೂ ತನ್ನದೇ ಎಂದು ಮೆರೆಯುತ್ತಿದ್ದಾನೆ.
ಅಜ್ಞಾನದ ಮಾತುಗಳು, ಅರ್ಥವಿಲ್ಲದ ಆಲೋಚನೆಗಳು, ಆರೋಗ್ಯವಿಲ್ಲದ ಚೇತನಗಳಾಗಿ ಮಾರ್ಪಟ್ಟಿವೆ. ತನ್ನನ್ನು ತಾನೇ ಹೆಚ್ಚಿಸಿಕೊಂಡರು, ತನ್ನಲ್ಲೇ ತಾನು ನಂಬಿಕೆ ಕಳೆದುಕೊಂಡು ಬಾವಲಿಗಳಂತೆ ಹೊಸತನ ತೋರಿಸುತ್ತಿದ್ದಾನೆ.
ನಾಳೆ ಎನುವುದು ಇದ್ದರೂ ಅದರಲ್ಲಿ ನಾವಿರುತ್ತೇವೆಯೋ ಎಂಬ ಚಿಂತನೆಗಳಿಗೆ ದಾರಿ ಮಾಡುವುದು ಒಳಿತು. ಯಾರದೋ ಚೈತನ್ಯ ನುಡಿಗಳು ನಮ್ಮಲ್ಲಿ ನುಡಿಗಳಾಗಿ ನೆನಪೊಳಗಿದ್ದರೆ ಸಾಲದು. ಅದು ಕ್ರಿಯೆಯ ಚಾಲನೆಯಲ್ಲಿರಬೇಕು.



- ರಾಬರ್ಟ್ ಕವನ್ರಾಗ್, ಮೈಸೂರು -

ಸೋಮವಾರ, ಆಗಸ್ಟ್ 24, 2020

 'ನಮ್ಮನ್ನೇ ನಾವು ಮಾರಿಕೊಳ್ಳುವ ಅಧೋಗತಿ!'


ಅನ್ನದಾನ, ವಿದ್ಯಾದಾನ, ಸ್ವತ್ತಿನ ದಾನಗಳೆಲ್ಲವೂ ಸಾಧಾರಣವಾಗಿ ಒಬ್ಬ ವ್ಯಕ್ತಿ ಜೀವಂತ ಇರುವಾಗ ಮಾಡುವುದಾಗಿದೆ.

ನೇತ್ರದಾನ,‌ ಕಿಡ್ನಿ ದಾನ, ಅಂಗಾಂಗ ದಾನಗಳು ಸ್ವ ಇಚ್ಛೆಯಿಂದ ತಮ್ಮನ್ನೇ ಅರ್ಪಿಸಿಕೊಳ್ಳುವುದಾಗಿದೆ.
ಇದು ಒಬ್ಬ ವ್ಯಕ್ತಿಯ ಮರಣದ ನಂತರದ್ದಾಗಿದೆ.

ಇವೆರಡರ ಕಾಲ ಅದಲು ಬದಲಾದರೆ ಏನೋ ವಿಫಲತೆ ಸಂಭವಿಸಿದೆ ಎಂಬುದು ಖಚಿತ.
ಜೀವಂತವಾಗಿ ಇರುವಾಗಲೇ ಪ್ರಾಣ ಸ್ನೇಹಿತನಿಗಾಗಿಯೊ, ಒಡಹುಟ್ಟಿದವರಿಗಾಗಿಯೊ, ಸಂಗಾತಿ ಹೆತ್ತವರಿಗಾಗಿಯೊ ತಮ್ಮ ಕಿಡ್ನಿಯನ್ನು ದಾನ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.
ಸಾಯುವ ಕೊನೆಯ ಗಳಿಗೆಯಲ್ಲಿ ತಮ್ಮನ್ನೇ ದಾನವಾಗಿ ಕೊಟ್ಟ ಉದಾಹರಣೆಗಳೂ ಇವೆ.
ಆದರೆ ಜೀವನದಲ್ಲಿ ಸೋತಿದ್ದೇವೆ, ಬದುಕುವ ದಾರಿ ಕಾಣುತ್ತಿಲ್ಲ, ಒಂಟಿತನ ಕಾಡಿಸುತ್ತಿದೆ .... ಇಂತಹ ಕಾರಣಗಳಿಂದ ಅನೇಕರು ಅಂಗದಾನಕ್ಕೆ ಸಿದ್ಧರಾಗಿಬಿಡುತ್ತಾರೆ.
ಹಣದ ಸಂಕಷ್ಟದಿಂದ ಸಾಲವನ್ನು ತೀರಿಸಲು ಸಾಧ್ಯವಾಗದೆ ನರಳುತ್ತಿರುವವರಲ್ಲಿ‌ಅನೇಕರು ಇಂತಹ ಕೃತ್ಯಕ್ಕಿಳಿಯಿತ್ತಾರೆ.

ಇದು ಸೂಕ್ತವೇ? ಎಂದು ಯೋಚಿಸುವುದಕ್ಕಿಂತಲೂ ಇವೆಲ್ಲವೂ ಅಜ್ಞಾನದ, ಅತಿರೇಕದ ಬುದ್ಧಿಹೀನ ಕೆಲಸವಾಗಿದೆ ಎಂಬುವುದರಲ್ಲಿ‌ ಎರಡು ಮಾತಿಲ್ಲ.

ಇಂತಹವರು,
@ ತಮ್ಮನ್ನು ತಾವು ಮೊದಲು ಗೌರವಿಸಿ, ಪ್ರೀತಿಸಿಕೊಳ್ಳಬೇಕು. ಏಕೆಂದರೆ ಅಂಗಾಂಗಗಳನ್ನು ಕಳೆದುಕೊಂಡರೆ ಮತ್ತೆ ಪಡೆಯಲು ಅಸಾಧ್ಯ.
@ ಎಲ್ಲಾ ಸಮಸ್ಯೆಗಳಿಗೂ ಪರಿಹಾರ, ಕಷ್ಟಕ್ಕೆ ಅಂತ್ಯವಿದೆ ಎಂಬ ವಿಶ್ವಾಸವಿರಬೇಕು.
@ ಈ ಜಗತ್ತಿನಲ್ಲಿ ಯಾರೂ ಒಂಟಿಯಲ್ಲ.
@ ತಮಗಿಂತಲೂ ತೊಂದರೆ, ಕಷ್ಟದಲ್ಲಿರುವವರನ್ನು ಅದರಲ್ಲೂ ಆಸ್ಪತ್ರೆ, ಅನಾಥಾಶ್ರಮ, ಅಂಗಹೀನತೆ, ಬುದ್ಧಿಮಾಂದ್ಯತೆಯವರನ್ನು ಭೇಟಿಯಾಗಬೇಕು.
@ ತಮ್ಮಲ್ಲಿರುವ ಧನಾತ್ಮಕತೆಗಳನ್ನು ಗುರುತಿಸಿಕೊಂಡು ಅವುಗಳನ್ನು ಅಭಿವೃದ್ಧಿಪಡಿಸಿಕೊಂಡು ಚಿಂತೆಗಳಿಗೆ ಮುಕ್ತಾಯ ಹಾಡುವುದು.
@ ಪ್ರೀತಿ, ಕ್ಷಮೆ, ಸೇವೆಗಳಂತ ಅಂತರಿಕ ತೃಪ್ತಿಗೆ, ಸಮಾಜಮುಖಿ ಕಾರ್ಯಗಳಲ್ಲಿ ಸಮಯ ಕಳೆಯುವುದು.
@ ಆಧ್ಯಾತ್ಮಿಕತೆಯ, ‌ಸಾಧನೆಯ ಹಾದಿಯಲ್ಲಿ ನಡೆಯುವುದು.
ಇಂತಹ ಒಳ್ಳೆಯ ವಿಷಯಗಳತ್ತ ತಮ್ಮನ್ನು ತಾವು ಕಂಡುಕೊಂಡರೆ, ಇಲ್ಲಸಲ್ಲದ ಯೋಚನೆಗಳು ಮಾಯವಾಗಿ ಮನಸ್ಸು ನಿರ್ಮಲಗೊಂಡು ಬದುಕಿಗೆ ಅರ್ಥ ದೊರಕುತ್ತದೆ.
ಹುಟ್ಟಿದವರು ಒಂದು ದಿನ ಉಸಿರನ್ನು ತ್ಯಜಿಸಲೇಬೇಕು, ಆದರೆ ತಮ್ಮನ್ನು ತಾವೇ ಸಂಪೂರ್ಣ ಶೂನ್ಯ ಎಂದುಕೊಳ್ಳಬಾರದು. ಏಕೆಂದರೆ ದೇವರ ಪ್ರೀತಿಯ, ದೇವರ ರೂಪದ ಮಾನವರಿಗಾಗಿಯೇ ಸಮಸ್ತ ಸೃಷ್ಟಿಯೂ ಉಂಟು ಮಾಡಲ್ಪಟ್ಟಿತು. ಯಾವ ಕಾರಣಕ್ಕೂ ನಮ್ಮನ್ನು ನಾವು ಮಾರಿಕೊಳ್ಳುವುದು ಸಲ್ಲದು. ಏಕೆಂದರೆ
ಮಾನವನಿಗೆ ತನ್ನನ್ನು ತಾನು ಮಾರಿಕೊಳ್ಳುವ ಅಥವಾ ಅಂತ್ಯಗೊಳಿಸಿಕೊಳ್ಳುವ ಯಾವುದೇ ಹಕ್ಕಿಲ್ಲ.


: ರಾಬರ್ಟ್ ಕವನ್ರಾಗ್, ಮೈಸೂರು :

ಸೋಮವಾರ, ಆಗಸ್ಟ್ 10, 2020

ಸಾಮಾಜಿಕ ಅಂತರ

 

ಆಂತರ್ಯ + ಮನಸ್ಸು

 ಆಂತರ್ಯ + ಮನಸ್ಸುಗಳು ಮೌನ ತಾಳಿದಾಗ!

ಬೆಳಕು ಎಲ್ಲಕ್ಕಿಂತಲೂ ವೇಗವಾಗಿ ಚಲಿಸುತ್ತದೆ. ಆದ್ದರಿಂದಲೇ ಮಿಂಚಿನ ನಂತರದಲಿ ಗುಡುಗು ಕೇಳಿಸುವುದು. ಬೆಳಕಿಗಿಂತಲೂ ವೇಗದಲ್ಲಿ ತಲುಪುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಅದು ಪ್ರಪಂಚದ ಯಾವ ಮೂಲೆಗಾದರೂ ಏನೂ ಬ್ರಹ್ಮಾಂಡವನ್ನೇ ಸುತ್ತಿಬರುತ್ತದೆ. ಅದು ಯಾರ, ಯಾವುದೇ ಹಿಡಿತಕ್ಕೂ ಸಿಗದಂತಹ ಮಹಾ ಪ್ರಚಂಡ. ವೈಶಿಷ್ಟ್ಯವೆಂದರೆ ಅದು ಯಾರಲ್ಲಿದೆಯೊ ಆ ವ್ಯಕ್ತಿಯ ಅಪ್ಪುಗೆಯಲ್ಲಿ ಮಾತ್ರ ತನ್ನನ್ನು ತಗ್ಗಿಸಿಕೊಳ್ಳಬಲ್ಲದು. ಅದು ಅ ವ್ಯಕ್ತಿಯ ವ್ಯಕ್ತಿತ್ವದ ಭಾವಂತರಂಗ ಸ್ಪರ್ಶದ ಪರಿಮಿತಿಯಲ್ಲಿ ಮಾತ್ರವೇ ಸಾಧ್ಯ. ಆ ಮನಸ್ಸು ಅಥವಾ ಚಿತ್ತವೇ ಅಂತರಾಳದ ಸ್ನೇಹಿತ. ಈ ಗೆಳೆಯರಿಬ್ಬರೂ ಪ್ರತಿ ಹೃದಯದ ತುಡಿತಗಳನ್ನೂ ಬಲ್ಲವರಾಗಿದ್ದು ಸದಾ ಮಾತನಾಡಿಕೊಂಡು ಅದರ ಸುಸ್ಥಿಗೆ ಯೋಜನೆಗಳನ್ನು ರೂಪಿಸುತ್ತಾರೆ.
ಒಬ್ಬ ವ್ಯಕ್ತಿಯ ಜ್ಞಾನ, ನಡತೆ, ಗುಣ, ರೂಪ, ಸ್ಥಿತಿಗತಿ, ಸಾಧನೆಗಳೆಲ್ಲವೂ ಇವುಗಳಲ್ಲಿ ಕೇಂದ್ರಿಕೃತವಾಗಿದೆ. ಅವುಗಳು ತಮ್ಮ ಮಾತನ್ನು ಅರೆಕ್ಷಣ ತಡೆಹಿಡಿದರೂ ಇಡೀ ವ್ಯಕ್ತಿ ವ್ಯಕ್ತಿತ್ವ ವಿರೂಪಗೊಳ್ಳುತ್ತದೆ.
ಮುಂದಿನ ದೃಷ್ಟಿಕೋನ, ಮುಂದಿನ ಯೋಜನೆಗಳು,‌ ಮುಂದಿನ ಬದುಕು ಇದ್ದಕ್ಕಿದ್ದ ಹಾಗೆ ತಿರುವನ್ನು ತೆಗೆದುಕೊಳ್ಳುತ್ತವೆ.
ಇದರಿಂದಲೆ ಸಾಧನೆಗಳತ್ತ ಪಯಣಿಸುವ ಭರವಸೆಯ ಬಲಗಳು, ಸಾಕ್ಷಾತ್ಕಾರದತ್ತ ಧಾವಿಸುವ ಸಾತ್ವಿಕ ನಿಲುವುಗಳು ತಮ್ಮತನವನ್ನು ಜಾರಿಸಿಬಿಟ್ಟು ಹೊಸ ಮಾರ್ಗದಲ್ಲಿ ಮುಂದುವರೆಯುತ್ತವೆ. ಇದರಿಂದ ಒಳಿತನ್ನು ಕಾಣಬಹುದು, ಅಳಿವನ್ನು ನಿರೀಕ್ಷಿಸಬಹುದು.
ಉತ್ತಮವಾದ ಹೊಸ ಪರಿಚಯವಿದ್ದರೆ ಯಾವ ತೊಂದರೆಗಳು ಇರದು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಭೀತಿಯನ್ನು ಉಂಟು ಮಾಡಬಲ್ಲ ತಾಪಕ್ಕೆ ದಾರಿಯಾದರೆ ಅನಾಹುತ ಸಂಭವಿಸುವುದು.
ತಿಳಿ ಹೇಳುವವರ ಒಂದು ದೃಢವಾದ ಮಾತು, ದಾರಿದೀಪದಂತಿರುವ ಒಂದೇ ಒಂದು ಕಿಡಿ ಅದು ಧಾರ್ಮಿಕವಾಗಿರಲಿ, ಸಾಮಾಜಿಕವಾಗಿರಲಿ ಮುಂಬರುವ ಅನುಭವಗಳನ್ನೇ ಆತಂಕಕಾರಿಯಾಗಿ ಪರಿಣಮಿಸಲು ಕಾರಣವಾಗುತ್ತವೆ.
ಆದ್ದರಿಂದ
- ವಿದ್ಯೆಗೆ ನದಿಯಾಗಿರುವ ಶಿಕ್ಷಕರು,
- ಜ್ಞಾನಕ್ಕೆ ಪೂರಣವಾಗಿರುವ ಮೇಧಾವಿಗಳು,
- ಧಾರ್ಮಿಕತೆಯ ಮೂಲಕ ಆತ್ಮ ಬೆಳವಣಿಗೆಗೆ ಆದರ್ಶ ಪ್ರಾಯರಾದವರು,
- ಸಾಧನೆಗಳ ಹಾದಿಯ ಸ್ಪೂರ್ತಿದಾಯಕರುಗಳ.......
* ಮನ-ಮನದಾಳದ ಮಾತಿನಲ್ಲಿ ನಿಖರವಾದ ಪದಗಳಿರಬೇಕು.
* ಸತ್ಯತೆಯ ಸಿಂಚನಗಳಾಗಿರಬೇಕು,
* ಸದ್ಗುಣಗಳನ್ನು ಶೃಂಗರಿಸಿಕೊಂಡ ರೂಪವಂತರಾಗಿರಬೇಕು.
* ಜ್ಞಾನದ ಕೊರತೆಗಳಿದ್ದರೂ ಸಾಮಾಜಿಕ ಧನಾತ್ಮಕ ಚಿಂತನೆಗಳ ಸುಗಂಧ ಸೂಸುವವರಾಗಿರಬೇಕು.
* ವಿದ್ಯಾವಂತರಲ್ಲದಿದ್ದರೂ ವಿಷಯಗಳ ಸಮರ್ಪಕ ಜಲಧಾರೆಯಾಗಿರಬೇಕು.
* ಸ್ವಾರ್ಥ, ಅಹಂಗಳಂತಹ ಅಲ್ಪತನಗಳ ಎದುರಾಳಿಯಾಗಿರಬೇಕು.
ಪ್ರಾಮಾಣಿಕತೆ, ಪರಿಶುದ್ದತೆ, ಪರಿಪೂರ್ಣತೆಗಳನ್ನು ಪಾಲಿಸಲು ಪ್ರಯತ್ನಿಸುತ್ತಾ ಪಾವನತೆಯನ್ನು ಪಡೆದುಕೊಂಡವರಾಗಿರಬೇಕು.
ಅಂತಿಮವಾಗಿ ತಾವು ತಮಗಾಗಿ ಅಲ್ಲ ತಮ್ಮಲ್ಲಿ ಭರವಸೆಯನ್ನಿಟ್ಟು ಬರುವವರ ಸೇವೆಯನ್ನು ಮಾಡುವವರು ಎಂಬ ಮನೋಭಾವದ ಮನುಷ್ಯರಾಗಿರಬೇಕು.


- ರಾಬರ್ಟ್ ಕವನ್ರಾಗ್, ಮೈಸೂರು

*ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*

 *ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*


ನೋವು, ದುಃಖ, ಸಂಕಟ, ಭಯ, ಕಳವಳ, ಕೊರಗು, ಕೀಳರಿಮೆ, ಕೋಪ, ಒಂಟಿತನ, ಅತೃಪ್ತಿ, ಉದ್ವೇಗ, ವ್ಯಥೆಗಳಂತ ನಿರಾಶೆಗೆ ಸಂಬಂಧಪಟ್ಟ ಅಸ್ವಾಭಾವಿಕ ವರ್ತನೆಗಳು ನಮ್ಮನ್ನು ನಿರ್ನಾಮದೆಡೆಗೆ ಕೊಂಡೊಯ್ಯುವ ಮಾದಕ ವಸ್ತುಗಳಿದ್ದಂತೆ.
ನಮ್ಮ ಮಾನಸಿಕ, ಆಧ್ಯಾತ್ಮಿಕ ವೈರಿ ಮಾನುಷ ಗುಣದವನನ್ನು ಹೆಸರಿಲ್ಲದಂತೆ ಅಳಿಸಲು, ಇವುಗಳನ್ನು ತಿಳಿಯಾದ ಮನಸ್ಸಿನ್ನೊಳಗೆ ಅಘಾತಕಾರಿ ವಿಷಜಂತುವಾಗಿ ಉಲ್ಬಣಗೊಳ್ಳಲು ಬಿಡುತ್ತಾನೆ.
ಆರಂಭದಲ್ಲಿ ಸರಾಗವಾಗಿ ಸ್ವೀಕರಿಸುವ ವ್ಯಕ್ತಿ, ತನ್ನನ್ನು ತಾನು ಕಾಪಾಡಿಕೊಳ್ಳುತ್ತೇನೆ ಎಂಬ ಪೊಳ್ಳು ಭರವಸೆಯಲ್ಲಿ ಇರುತ್ತಾನೆ. ಆದರು ಅನುಮಾನಪಡುತ್ತಲೇ ಒಳಗೊಳಗೆ ಮುದುಡುತ್ತಾನೆ.
ಕ್ರಮೇಣ ವ್ಯಾಪಿಸತೊಡಗುವಾಗ ಇಂದಲ್ಲ ನಾಳೆ ತನ್ನಿಂದ ಅದು ತೊಲಗುತ್ತದೆ ಎಂದುಕೊಂಡರೂ, ಒಳಗೊಳಗೆ ಅಳುಕುತ್ತಾನೆ. ಮುಂದೆ ಒಂದು ದಿನ ಸಂಪೂರ್ಣವಾಗಿ ಆವರಿಸುವಾಗ ಕಳವಳ ಪಡುತ್ತಾನೆ.
ಅಳು, ನಿರಾಶೆ, ಅಪನಂಬಿಕೆ, ಮರೆವು, ಶೂನ್ಯತೆ, ಸಾವಿನ ಚಿಂತೆಗಳು ಅವನಲ್ಲಿ ಅಸ್ತಿತ್ವವನ್ನು ಪಡೆಯತೊಡಗುತ್ತವೆ.
* ಇದರಿಂದ ಅನೇಕರು ತಮ್ಮನ್ನೆ ತಾವು ಕಳೆದುಕೊಂಡು ಪ್ರಾಪಂಚಿಕತೆಯನ್ನು ಮರೆಯಬಹುದು.
* ಅನೇಕ ಪ್ರತಿಭಾನ್ವಿತರು ಆಸಕ್ತಿ ಕಳೆದುಕೊಂಡು ಮೌನಿ ಆಗಬಹುದು.
* ಇನ್ನೂ ಅನೇಕರು ತಮ್ಮನ್ನೇ ಈ ಲೋಕದಿಂದ ಬೇರ್ಪಡಿಸಿಕೊಳ್ಳಲು ತವಕಿಸಿ ಸೋಲಬಹುದು ಅಥವಾ ಇಲ್ಲವಾಗಿಸಿಕೊಳ್ಳಬಹುದು.
ಇವುಗಳಿಗೆಲ್ಲ ಕಾರಣ ವೈರಿ ಬೀಸುವ ಋಣಾತ್ಮಕ ಬಲೆಯೊಳಗೆ ಅರಿವಿಲ್ಲದೆ ತಮ್ಮನ್ನೇ ಬಲಿಯಾಗಿಸಿಕೊಳ್ಳುವುದು!
ಪುಣ್ಯ ಪುರುಷರು, ಸಾಧಕರು, ಮೇಧಾವಿಗಳು, ಬುದ್ದಿವಂತ ಸುಗುಣರುಗಳಂತಹ ಯಾರನ್ನೂ ಇವು ಬಿಟ್ಟಿಲ್ಲ. ಇವುಗಳನ್ನು ಜಯಿಸಿದರೆ ಮಾತ್ರವೇ ಯಶಸ್ಸು, ನೆಮ್ಮದಿ ನಮಗೆ ಕಟ್ಟಿಟ್ಟ ಬುತ್ತಿ.
ಆದ್ದರಿಂದ ಕಣ್ಣು ಮಂಜಾಗುವುದರ ಮುನ್ನ,
ಕಿವಿ ಮಂದವಾಗುವ ಮುನ್ನ,
ಶರೀರ ಚೈತನ್ಯಹೀನವಾಗುವುದರ ಮುನ್ನ,
ಜ್ಞಾನ ಕದಡಿ ಹೋಗುವ ಮುನ್ನ, ಅಭಿಮಾನ ಕಳೆದೋಗುವ ಮುನ್ನ ನಮ್ಮೊಳಗಿನ ದೃಢತೆ ಕುಂದಿ ಹೋಗುವ ಮುನ್ನ ಕೆಲ ನಿಮಿಷಗಳನ್ನಾದರೂ ನಮ್ಮನ್ನು ನಾವು ಪ್ರಸ್ತುತದಲ್ಲಿ ಅವಲೋಕಿಸಬೇಕು.
ಇಲ್ಲದಿದ್ದರೆ ನಿರಾಶೆ ನಮ್ಮನ್ನು ಬಂಧಿಸಿ ನಿರ್ನಾಮಗೊಳಿಸಬಹುದು!
ವೈದ್ಯಕೀಯದಲ್ಲಿ ಆಂತರ್ಯದ ಬೆಂಬಲವನ್ನು ಪ್ರಥಮವಾಗಿ ಪರೀಕ್ಷಿಸುತ್ತಾರೆ. ಅದು ಇದ್ದರೆ ರೋಗಿಯ ಅರ್ಧ ಕಾಯಿಲೆ ಗುಣವಾದಂತೆಯೇ ಸರಿ. ಇದಕ್ಕಾಗಿಯೇ ರೋಗಿ ಸ್ಪಂದಿಸುತ್ತಿದ್ದಾನೆ ಎಂದು ಹೇಳುವುದು.
ಹಾಗೆಯೆ ನಮ್ಮ ಮೇಲೆ ನಕರಾತ್ಮಕ ತಲ್ಲಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಅರಿವು ಮೂಡುವಾಗಲೇ ಎಚ್ಚರವಹಿಸಬೇಕು.
ಕೆಲವೊಮ್ಮೆ ನಮಗರಿವಿಲ್ಲದಿದ್ದರು ಇತರರು ಗುರುತಿಸಿರುತ್ತಾರೆ. ಅವರು ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಅದನ್ನು ಉದಾಸೀನ ಮಾಡದೆ ಅದರಿಂದ ಬಿಡಿಸಿಕೊಳ್ಳುವ ಮಾರ್ಗ ಹುಡುಕಬೇಕು.
ಹೆದರಬೇಕಾದ ಪ್ರಸಂಗವಿಲ್ಲ. ಎಲ್ಲಾ ಸಂಕಷ್ಟಗಳಿಗೂ ಪರಿಹಾರ ಇದ್ದೇಇದೆ. ಇದು ಪ್ರಕೃತಿ ನಿಯಮ.
ಇದು ದೇವರ ನಿಯಮ. ದೈವಿಕತೆ ಎಂಬುದು ಅಗೋಚರ ಶಕ್ತಿ. ವಿಶ್ವಾಸ ಇರಬೇಕು.
ಯಾವುದೇ ಕಾರಣಕ್ಕೂ ನಿರಾಶೆಗೆ ಒಳಗಾಗಬಾರದು. ಸ್ವಾಭಿಮಾನ, ಅಹಂ, ತಮಗೆ ಕುಂದು ಬರಬಹುದೆಂಬ ಚಿಂತೆ, ಹಠ, ಅತಿಯಾದ ಕರ್ತವ್ಯ ಪ್ರಜ್ಞೆಗಳಂತವುಗಳನ್ನು ತೊರೆದು ನಮ್ಮನ್ನು ನಾವು ಉಳಿಸಿಕೊಳ್ಳಲು ಅಗೋಚರ ದೇವಬಲದಲ್ಲಿ, ನಮ್ಮೊಳಗಿನ ಅಂತರಾಳದ ಸಹವಾಸದಲ್ಲಿ ವಿಶ್ವಾಸವಿಡಬೇಕು.
ಮುಖ್ಯವಾಗಿ ನಮಗೆ ದೊರಕುವ ಸಮಯವನ್ನು ಶೂನ್ಯತೆಯಲ್ಲಿ ಹರಿದಾಡಲು ಬಿಡಬಾರದು!!
ಏಕೆಂದರೆ ನಾವಿದ್ದರೇನೆ ಈ ಪ್ರಪಂಚ!!!]


- ರಾಬರ್ಟ್ ಕವನ್ರಾಗ್, ಮೈಸೂರು. -

ಗುರುವಾರ, ಜುಲೈ 30, 2020

universalzhone : Music






'ಸಮಯದ ಕೊರತೆ ಎಂದಿಗೂ ಇರದು'

ಸ್ವಾಭಾವಿಕ ಕಾಲದ ತಾಳದಲ್ಲಿನ ಗತಿಯ ಲಯದಲ್ಲಿ ಎಲ್ಲರೂ ಎಲ್ಲವೂ ಹೆಜ್ಜೆ ಹಾಕಲೇಬೇಕು.

ಪ್ರತಿಕ್ಷಣಗಳ ನಾಡಿಮಿಡಿತಗಳಲ್ಲಿ ಏರುಪೇರಾದರೂ ಅದರ ಗತಿಯು ನಿರ್ಣಾಯಕ ಎಂಬುದು ಹೃದಯಬಡಿತ ತನ್ನ ನಾದವನ್ನು ಮೌನವಾಗಿಸಿಕೊಂಡಾಗಲೇ ತಿಳಿವಾಗುವುದು.

ಅಷ್ಟರವರೆಗೇ ತನ್ನಿಂದಲೇ ಎಲ್ಲವು, ತನಗಾಗಿಯೇ ಎಲ್ಲವೂ ಎನ್ನುತ್ತಾ ತನ್ನ ಹಿಡಿತದಲ್ಲಿ ಎಲ್ಲವನೂ ಅವಿತ್ತಿಟ್ಟುಕೊಳ್ಳುವ ಪ್ರಯತ್ನದಲ್ಲಿ ಆ ನಿಮಿಷ ಸೋಲನ್ನು ಅನುಭವಿಸುತ್ತಾನೆ.
ಯಾರನ್ನು ತನ್ನ ಪ್ರಾಣ ಎಂದುಕೊಂಡು ಸದಾ ಅಪ್ಪಿಕೊಂಡಿದ್ದರೋ ಆ ಪ್ರಾಣ ಪಕ್ಷಿ ವಿರೂಪಗೊಳ್ಳಲು ತೊಡಗುವಾಗ ಪಂಚೇಂದ್ರಿಯಗಳು ಮೆಲ್ಲಮೆಲ್ಲನೆ ವಿರುದ್ಧಾತ್ಕಕವಾಗಿ ಕಾರ್ಯವೆಸಗಲು ಹವಣಿಸುತ್ತದೆ. ಅಲ್ಲಿಯವರೆಗೆ ಕಳೆದ ಸಮಯಗಳೆಲ್ಲವೂ ವ್ಯರ್ಥವೆಂದೆನಿಸಿ ಘಟಿಸಿದ್ದೆಲ್ಲವು ಗೊಬ್ಬರವಾಗುವ ಕ್ರಿಯೆಯಂತೆ ಅನುಭವದಿಂದ ಉಂಟಾದ ಅನುತಾಪವೆಲ್ಲವೂ ನೆನಪೆಂಬ ಬುಟ್ಟಿಯಲ್ಲಿ ಬೀಳುತ್ತವೆ.
ನಿದ್ದೆಗೆಟ್ಟು, ಬಣ್ಣಗೆಟ್ಟು, ಅಳತೆ ಮೀರಿ, ಎದೆಯುಬ್ಬಿಸಿ, ಕಣ್ಣರಳಿಸಿ, ಬಯಸಿಬಯಸಿ ಮಾಡಿದ್ದೆಲ್ಲವೂ, ಮಾಡಿಟ್ಟಿದ್ದೆಲ್ಲವೂ ಅಲ್ಲಿಗಲ್ಲೆ ತಲೆತಗ್ಗಿಸಿ ನಿಂತುಬಿಡುತ್ತವೆ.
ತುಂಬಿಸಿಟ್ಟ ಗಾಡಿಯನ್ನೆಳೆಯಲು ಸಾಕಿದ ಸಂಗಾತಿ, ಕುಡಿಗಳೇ ಓಗೊಡದೆ ಸರಿದುಬಿಡುತ್ತಾರೆ.
ಹೀಗಿರುವಾಗ ಸಮಯವನ್ನು ಒತ್ತಡದಿಂದ ಹೊದೆಯುವುದರಿಂದ ಪ್ರಯೋಜನವೇನು?
ತಮಗೂ ಸುಖನೆಮ್ಮದಿಯಿಲ್ಲದೆ, ತಮ್ಮೊಂದಿರುವವರಿಗೂ ನಗುಮುಖ ತೋರಿಸದೆ ಪರಿತಪಿಸಿ ಬದುಕುವ ನೀತಿಯೇಕೆ?
ವ್ಯರ್ಥ ಎಲ್ಲವೂ ವ್ಯರ್ಥವೆಂಬ ಅಂತಿಮ ಕೊರಗಿನಿಂದ ಕೊನೆಯಾಗುವುದೇಕೆ?
ದುಡಿಯುವುದರೊಂದಿಗೆ ದಣಿದ ಮನಕೆ ಮಧುರವಾಗಿರಬೇಕು.
ಪ್ರಾಮಾಣಿಕತೆಯೊಂದಿಗೆ ಪ್ರೀತಿಯ ಅಪ್ಪುಗೆಗೆ ಪರಿಪೂರ್ಣವಾಗಿರಬೇಕು.
ದೊರೆತ ಸಮಯದಲ್ಲಿ ದೊರೆಯಂತೆ ಅಲ್ಲದಿದ್ದರೂ ದೂರಿಲ್ಲದೆ, ದೂರದೆ ಉಸಿರನ್ನು ಉಸಿರಾಗಿಸಿಕೊಂಡು ಉಳಿಯಬೇಕು.
ದೇವರು-ಧರೆಯ ಒಡನಾಟದೊಂದಿಗೆ ನಿರಾಳತೆಯಿಂದ ಸಮಯವನ್ನು ಸಮಾನತೆಯಲ್ಲಿ ಸಂಯೋಜಿಸಿಕೊಳ್ಳಬೇಕು.
ಆಗ ಸಮಯ ಕಾಡಿಸುವುದಿಲ್ಲ.
ಕಾನನದಲ್ಲಿ ಕಾಣದ ಅನುಭವಗಳಲ್ಲಿ ನವಿರೇಳಿಸಿಕೊಂಡು, ಭಯವನ್ನೂ ರೋಮಾಂಚನವಾಗಿ ಪರಿವರ್ತಿಸಿಕೊಂಡು ಗುರಿಯೆಡೆಗೆ ಗುರುತ್ತಿಲ್ಲದಂತೆ ನೆಮ್ಮದಿಯಿಂದ ಹೆಜ್ಜೆ ಇಡಬಹುದು.
ಆ ನೆಮ್ಮದಿಯೊಂದಿಗೆ ಹೊರಟ ಬಾಳ ನೌಕೆಯು ಎಂತಹ ಬಿರುಗಾಳಿಯನ್ನು ಎದುರಿಸುವ ಧ್ಯೆರ್ಯದೆಡೆ ಧಾವಿಸ ತೊಡಗುತ್ತದೆ.
ಆಗ ಮನಸ್ಸೆಂಬ ಮಿಂಚಿನ ನೋಟದಲ್ಲಿ ಕೇವಲ ದಡ ಸೇರುವ ಸಂತೃಪ್ತಿಯ ಭಾವಕ್ಕೆ ಮಾತ್ರ ಸ್ಥಳವಿರುತ್ತದೆ. ಸಮಯವು ಸಾಧಾನೆಗೆ ಮೀಸಲಾಗಿರುವಾಗ ಸಮಯದ ಅಭಾವವು ಗೋಚರಿಸುವುದಿಲ್ಲ.
ಏಕೆಂದರೆ ಪ್ರತಿಯೊಂದು ಕ್ಷಣಗಳೂ ಸಹ ತನ್ನನ್ನು ಕಳೆದುಕೊಳ್ಳುವುದಿಲ್ಲ.
ಯಾವಾಗ ಮುನ್ನೋಟದಲ್ಲಿ ಆತಂಕ ಅನುಮಾನಗಳು ಕಾಣಿಸಿ ಮನಸ್ಸು ಚಂಚಲವಾಗುತ್ತದೋ ಆಗ ಸಮಯಗಳು ಭಾರವಾಗುತ್ತವೆ.
ಯಾವಾಗ ಹೃದಯದಲ್ಲಿ ನಿರಾಶೆಯ ಅಪನಂಬಿಕೆಯ ಮಾಧರಿಗಳು ರೂಪುಗೊಳ್ಳುತ್ತವೋ ಸಂಬಂಧಗಳೆಲ್ಲವೂ ದೂರ ಸರಿದಂತಾಗಿ ನಿಖರತೆಯಿಲ್ಲದೆ ನಿರ್ನಾಮದ ಚಿಂತೆಗಳು ಆವರಿಸಿಕೊಳ್ಳುತ್ತವೆ.
ಆಗ ಮುಂದಡಿಯಿಡಲಾರದ ಹೆಜ್ಜೆಗಳು ಅಲ್ಲೇ ಕುಸಿದು ಬಿಡುವ ಆಲೋಚನೆಗಳಿಗೆ ನಾಂದಿಯಾಡುತ್ತವೆ. ಕಾಲವು ಭೀಕರವಾಗಿ ಕಣ್ಣುಗಳು ಕತ್ತಲೆಯತ್ತ ಧಾವಿಸುತ್ತಲು ತವಕಿಸುತ್ತವೆ. ಕ್ಷಣಗಳು ಗಂಟೆಗಳಾಗಿ, ಗಂಟೆಗಳು ವಾರಗಳಾಗಿ, ವಾರಗಳು ವರ್ಷಗಳಂತೆ ಮೇಲೆರುವಂತೆ ಭಾಸವಾದಾಗ ಬದುಕು ಅರ್ಥವನ್ನು ಕಳೆದುಕೊಳ್ಳತೊಡಗುತ್ತವೆ. ಅದ್ದರಿಂದ ನೋಟ, ಮನಸ್ಸು, ಹೃದಯ, ಹೆಜ್ಜೆಗಳಲ್ಲಿ ದೃಢತೆ, ನಂಬಿಕೆ, ವಿಶ್ವಾಸ ಬೆರೆತಾಗ ಸಮಯವು ಸಾಲದಾಗುತ್ತವೆ.
ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡಾಗ ಸಮಯದ ಕೊರತೆಯೂ ಕಾಣದಾಗುತ್ತವೆ.
ಸಮಯವೂ ಸಹ ನಮ್ಮ ಜೊತೆ ಸಾಗುತ್ತದೆ.


ಶನಿವಾರ, ಜುಲೈ 4, 2020

*ಏಕಾಂತವೆಂಬ ಕಾಂತಿ ಹೀನತೆ*



ಪ್ರಾಣಿಪಕ್ಷಿ, ಕ್ರಿಮಿಕೀಟ, ಜಲಚರ, ಭೂಚರ ... ಸಮಸ್ತ ಜೀವಿಗಳು ಕೆಲವು ದೈಹಿಕ ಸ್ಥಿತಿಗತಿಯಲ್ಲಿ ಕೆಲ ಸಮಯ ಏಕಾಂತ ಅಗತ್ಯವಿದ್ದರೂ, ಒಂಟಿತನ ಇರುವುದಿಲ್ಲ.
ಪ್ರಾಕೃತಿಕ ಸಮಸ್ಥಿತಿಯನ್ನು ಕಾಪಾಡಿಕೊಳ್ಳಲು ಪ್ರತಿಯೊಂದು ಜೀವಿಗಳಲ್ಲಿಯೂ ಕ್ರಮಬದ್ದವಾದ ನಡುವಳಿಕೆ ಇರುತ್ತದೆ. ಕೂಡುವುದು, ಕಳೆಯುವುದು, ಬೆಳೆಯುವುದು, ಬೆಳೆಸುವುದು, ಕಟ್ಟುವುದು, ಹುಡುಕುವುದು, ಕೂಡಿಡುವುದು, ವಿರಮಿಸುವುದು... ಹೀಗೆ ತಮ್ಮನ್ನು ನಿಶ್ಚಿತ ತಹಬದಿಯಲ್ಲಿ ಯಾವುದೇ ಜಂಜಾಟವಿಲ್ಲದೆ ಕೊನೆಯವರೆಗೆ ಮುಂದುವರೆಸುತ್ತವೆ. 
ಉಳಿವಿಗಾಗಿ ಕೆಲವೊಮ್ಮೆ ಕಾದಾಡುತ್ತವೆ.
ಆದರೆ ಮಾನವ ಎಂಬ ಪ್ರಾಣಿ ನವ ಮಾಪಕದತ್ತ ದೃಷ್ಟಿನೆಟ್ಟು ಇತರ ನಡುವಳಿಕೆಗಳ ಕಡೆ ಗಮನ ನೀಡುವುದಕ್ಕಿಂತಲೂ ಹೆಚ್ಚಾಗಿ ತನ್ನುಳಿವಿಗಾಗಿ ಕೊನೆಯುಸಿರಿರುವರೆಗೂ ಕಾದಾಡುತ್ತಲೇ ಇರುತ್ತಾನೆ.
ನಾಗರಿಕತೆಯ ನೌಕೆಯಲ್ಲಿ ಪಯಣಿಸುವ ಮನುಜ, ಸೃಷ್ಟಿಯೊಳಗೇ ಇದ್ದು ಅದನ್ನು ಅವಲಂಬಿಸಿದ್ದರೂ ತಾನು ತನ್ನಿಂದಲೇ ತನ್ನುಳಿವು ಎಂಬಂತೆ ಕಾಲದೂಡುತ್ತಾನೆ.
ಆಚಾರವಿಚಾರ, ಜಾತಿಧರ್ಮ, ಕಾನೂನು ಕಟ್ಟಳೆಗಳ ಹೆಸರಿನಲ್ಲಿ ತನ್ನನ್ನು ತಾನೇ ಬಂಧಿಸಿಕೊಳ್ಳುತ್ತಾನೆ. ಕೊಸರಿಕೊಂಡು ಕೊರಗುತ್ತಾನೆ.
ಸಂಗಮ, ಸಂಯಮ, ಸಂಧಾನ, ಸಂಸಾರ, ಸಂಚಾರಗಳಲ್ಲಿ ಸರಿಗಟ್ಟಲಾರದೆ ಸಹನೆಗಳಲ್ಲಿ ಸೋಲುತ್ತಾನೆ. 
ತನ್ನಿಚ್ಛೆಗಳನ್ನು ಪೂರೈಸಿಕೊಳ್ಳಲಾಗದೆ, ಸರಿಸಿಡಲೂ ಆಗದೆ ತಳಮಳದಿಂದ ಮನಸಾಕ್ಷಿಗೆ ವಿರೋಧವಾಗಿ ನಡೆಯುತ್ತಾನೆ.
ಯಾವ ವಿಚಾರಗಳು‌ ತನ್ನ ಹದ್ದುಬಸ್ತಿಗಾಗಿ‌ ರೂಪಿಸಿಕೊಂಡನೋ ಅದೇ ಆತನ ಒಂಟಿತನಕ್ಕೆ ಕಾರಣವಾಗುವಾಗ ಮುದುಡುತ್ತಾನೆ. 
ದೇಹದ ಬಯಕೆ, ಮನಸ್ಸಿನ ಬಯಕೆಗಳನ್ನು ಸರಿದೂಗಿಸಲಾಗದೆ ನೀತಿನಿಯಮಗಳಿಗೆ ವಿರುದ್ಧ ದಿಕ್ಕನ್ನು ತೋರಿಸುತ್ತಾನೆ. ಸ್ವಾಭಿಮಾನ, ಅಹಂ, ಅನಾಸಕ್ತಿ, ಪಂಚೇಂದ್ರಿಯಗಳ ಬಯಕೆ, ಅತಿಯಾಸೆಗಳಿಂದ ಅನೇಕರು ಸಮಾಜದಲ್ಲಿ ಎದ್ದು ಕಾಣುತ್ತಾರೆ.
ತನಗೆ ಬೆಂಬಲವಿಲ್ಲ, ಯಾರೂ ಪ್ರೀತಿಸುತ್ತಿಲ್ಲ, ಜೊತೆಗಾರರಿಲ್ಲ, ತನ್ನಾಸೆಗೆ ಸಹಕರಿಸುವವರಿಲ್ಲ, ಪ್ರತಿಭೆಗಳಿಗೆ ಉತ್ತೇಜನ ಸಿಗುತ್ತಿಲ್ಲವೆಂಬಿತ್ಯಾದಿಗಳಿಂದ ಕೊರಗುತ್ತಾರೆ. 
ತಾನು ನಿರ್ಲಕ್ಷಕ್ಕೆ ಒಳಗಾಗಿದ್ದೇನೆ ಎಂಬ ಚಿಂತೆಯಲ್ಲಿ ಸೊರಗುತ್ತಾರೆ.
ಮಹಿಳೆಯರಲ್ಲಿ‌ ಏಕಾಂಗಿ ಭಾವನೆ ಕಾಡಿಸುವುದೇ ಹೆಚ್ಚು. 
ಗಂಡ ತನ್ನನ್ನು ನಿರಾಕರಿಸುತ್ತಿದ್ದಾನೆ ಎಂಬ ಚಿಂತೆ ಅನೇಕರಿಗಿದೆ. 
ವಿಧವೆಯಾದರಂತೂ ಸಮಾಜ ಅವರನ್ನೂ ಬೇರೆ ವಿಧದಲ್ಲಿಯೇ ನೋಡುತ್ತದೆ. 
ಹೆತ್ತವರಿಲ್ಲದೆ ಮಕ್ಕಳು, ಮುದಿ ವಯಸ್ಸಿನಲ್ಲಿ ಹೆತ್ತವರು ಒಂಟಿತನದಿಂದ ದುಃಖಿಸುತ್ತಾರೆ. 
ಒಂಟಿತನ ಒಂದಿಲ್ಲೊಂದು ಬಾರಿ ಎಲ್ಲರನ್ನೂ ಕಾಡಿರುತ್ತದೆ. 
ಕೆಲವರು ಅದಕ್ಕೆ ಸೋತೆಬಿಟ್ಟಿರುತ್ತಾರೆ.
ಏಕಾಂತ ಕಾಡಿಸದಿರಲು,
* ಒಂಟಿತನವನ್ನು ತೊರೆಯುವ ಅನೇಕ ಮಾರ್ಗಗಳಿವೆ. ಅವುಗಳನ್ನು ಪಾಲಿಸಬೇಕು
* ಸದಾ ಕಾರ್ಯಪ್ರವೃತ್ತರಾಗಲು ಪ್ರಯತ್ನಿಸಬೇಕು.
* ಕಾಡಿಸುವ ಒಂಟಿತನದ ವಿಚಾರಗಳನ್ನು ನೆನಪಿಸಿಕೊಳ್ಳಬಾರದು.
* ಸ್ನೇಹ, ಉತ್ತಮ ಸಂಬಂಧಗಳನ್ನು ರೂಪಿಸಿಕೊಳ್ಳಬೇಕು.
* ಧ್ಯಾನ, ಆತ್ಮಸ್ಥೈರ್ಯಗಳನ್ನು ರೂಢಿಸಿಕೊಳ್ಳಬೇಕು.
* ಸಾವಧಾನವಾಗಿ ಚಿಂತಿಸಿ ಸೂಕ್ತ ಪರಿಹಾರವನ್ನು ಯಾವುದೇ ಸಂಕೋಚವಿಲ್ಲದೆ ಕಂಡುಕೊಳ್ಳಬೇಕು.
* ಒಂಟಿ ಎನ್ನುವ ಕನಿಕರ, ಕರುಣಾ ನೋಟಕ್ಕಾಗಿ ತವಕಿಸದೆ ಮನದಾಳದಲ್ಲಿ ನಾನು ಒಂಟಿಯಲ್ಲ ಎಂಬ ದೃಢತೆಗೆ ಪ್ರಯತ್ನಿಸಬೇಕು.
* ಒಂಟಿತನವನ್ನು ಒಂಟಿತನದಿಂದಲೇ ಗೆಲ್ಲಬೇಕು.!!!







ಬುಧವಾರ, ಜೂನ್ 24, 2020

'ಶಿಕ್ಷೆಯ ಮೂಲಕ ರಕ್ಷೆಯ ಜಯ?!'



ಶಿಕ್ಷಣವಿಲ್ಲದ ಊರಿಲ್ಲ, ಶಿಕ್ಷಕರಿಲ್ಲದೆ ಶಿಕ್ಷಣವಿಲ್ಲ. ಶಿಕ್ಷೆ ಇಲ್ಲದೆ ಸರಿದಾರಿಗೆ ತರುವ ಬೇರೆ ಮಾರ್ಗವೇ ಇಲ್ಲ!?
+ ದೇವರೂ ಸಹ ಸೂಕ್ತ ಕಾರಣಗಳಿಗಾಗಿ ಭಕ್ತರನ್ನು ಶಿಕ್ಷಿಸುತ್ತಾರೆ.
+ ಹೆತ್ತವರು ಮಕ್ಕಳ ಒಳ್ಳೆಯ ಭವಿಷ್ಯದ ಮುಂದಾಲೋಚನೆಯಿಂದ ಶಿಕ್ಷಿಸುತ್ತಾರೆ.
+ ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಿಸುತ್ತಾರೆ.
+ ಹಿರಿಯರು ಕಿರಿಯರ ಒಳಿತಿಗಾಗಿ ತಮ್ಮ ಅನುಭವಗಳನ್ನು ತಾಳೆ ಹಾಕುತ್ತ ಶಿಕ್ಷಿಸುವ ಬಗ್ಗೆ ಎಚ್ಚರಿಸುತ್ತಾರೆ.
ಹೀಗೆ ಶಿಕ್ಷೆ ಎಂಬುದು ನಾಗರಿಕತೆಯ ಪರಿಧಿಯಲ್ಲಿ ಮಾತ್ರವಲ್ಲ ಮಾನವ ಅಸ್ಥಿತ್ವವು ಈ ಭೂಲೋಕದಲ್ಲಿ ಬಂದ ಗಳಿಗೆಯಿಂದಲೂ ಇದೆ. 
ಅಷ್ಟೇ ಅಲ್ಲ  ಭೂಕಂಪ, ಚಂಡಮಾರುತ, ಬಿರುಗಾಳಿ, ಜಲಪ್ರಳಯ, ಕಾಡ್ಗಿಚ್ಚು ಹೀಗೆ ಅನೇಕ ಪ್ರಕೃತಿ ವಿಕೋಪಗಳು ಧರೆಯನ್ನು ನಿರ್ನಾಮ ಮಾಡಲು ಅಲ್ಲ. ಮಾನವರನ್ನು ಎಚ್ಚರಿಸಲು ತೋರಿಸುವ ಶಿಕ್ಷೆಗಳಾಗಿವೆ.
ಅಂತೆಯೇ ಶಿಕ್ಷಿಸುವವರು ಶಿಕ್ಷೆಯನ್ನು ನೀಡುವುದು ಇತರರ ಒಳಿತಿಗಾಗಿಯೇ! 
ಶಿಕ್ಷೆಯನ್ನು ಮತ್ತೊಬ್ಬರ ಅಳಿವಿಗಾಗಿ ನೀಡಿದ್ದಾರೆ ಎಂದಾಗ ಅದು ಶಿಕ್ಷೆ ಎನಿಸಿಕೊಳ್ಳದು. ಅದು ದ್ವೇಷ ಎನಿಸಿಕೊಳ್ಳುತ್ತದೆ.
ಆದರೆ ಮೂಢರಾಗಿ ವಿನಾಶದತ್ತ ಪಯಣಿಸುತ್ತಿರುವ ಈ ನಾಗರಿಕ ಸಮಾಜದಲ್ಲಿ ಹಿಡಿತವಿಲ್ಲದೆ ಬಾಳುತ್ತಿರುವ ಮಾನವರು ಶಿಕ್ಷೆಯನ್ನು ಬೇರೆ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದಾರೆ. 
ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ವಿವಿಧ ಕಾನೂನು ಕ್ರಮಗಳನ್ನು, ರೀತಿನೀತಿಗಳನ್ನು ರೂಪಿಸಿಕೊಂಡು ತಮ್ಮದೇ ಆದಂತಹ ದಾರಿ ಹಿಡಿಯಲು ಅನುಕೂಲಕರ ವಾತಾವರಣಗಳನ್ನು ನಿರ್ಮಿಸಿಕೊಂಡಿದ್ದಾರೆ.
ಹಿಂದೆ ತಮ್ಮ ಮಕ್ಕಳ ಒಳಿತಿಗಾಗಿ ಶಿಕ್ಷೆ ನೀಡಲು, ಶಿಕ್ಷೆ ಕೊಡಿಸಲು ಹಿಂದೇಟು ಹಾಕುತ್ತಿರಲಿಲ್ಲ. ಸಮಾಜದಲ್ಲಿನ ದುಷ್ಟತನ, ದರೋಡೆ,‌ ಮೋಸ, ವಂಚನೆಗಳನ್ನು ತೊಡೆದು ಹಾಕಲು ಅಪರಾಧಗಳಿಗೆ ತಕ್ಕಂತ ಶಿಕ್ಷೆಯನ್ನು ರೂಪಿಸಲಾಗಿದೆ. ಧಾರ್ಮಿಕವಾಗಿಯೂ ಪಾಪಗಳಿಗೆ ಶಿಕ್ಷೆಗಳು ನಿಗಧಿಯಾಗಿವೆ ಎಂದು ತಿಳುವಳಿಕೆ ಬೋಧಿಸಲಾಗುತ್ತದೆ. 
ಇದರಿಂದ ಇಂದಿನ ಸಮಾಜದಲ್ಲಿ ಮಕ್ಕಳು ಮಕ್ಕಳಾಗಿ ಇರಲು, ಮಹಿಳೆಯರು ಮಹಿಳೆಯಾಗಿರಲು ಸೋಲುತ್ತಿದ್ದಾರೆ, ಗಂಡಸರುಗಳ ಮಿತಿಮೀರಿ ನಡತೆಗಳು.... ಶಿಕ್ಷೆಗಳಲ್ಲಿನ ಏರುಪೇರಿನಿಂದಲೇ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರೆಯುತ್ತವೆ.
ಆದ್ದರಿಂದ ಶಿಕ್ಷೆಗಳು ಶಿಕ್ಷಣಕ್ಕಾಗಿ, ಉತ್ತಮ ಫಲಭರಿತ ಪರಿಣಾಮಕ್ಕಾಗಿ ಎಂಬುದನ್ನು ಅರಿಯಬೇಕು.
ಈ ನಿಟ್ಟಿನಲ್ಲಿ ವೈಯಕ್ತಿಕವಾದ ವಿಚಾರಗಳನ್ನು ಪ್ರಸ್ತಾಪಿಸುವಾಗ ಅನೇಕರು ತಮ್ಮ ಬಾಳಿನಲ್ಲಿ ಸಂಭವಿಸುವ ಘಟನೆಗಳನ್ನು ಶಿಕ್ಷೆಗಳೆಂದು ಪರಿಗಣಿಸುತ್ತಾರೆ. 
ಉದಾಹರಣೆಗೆ ಬಡತನ, ಅಪಘಾತಗಳು, ಅಸಂಭವ ಸನ್ನಿವೇಶಗಳು, ಸಾಂಸರಿಕ ಎಡರುತೊಡರಗಳು, ಬದಲಿಸದಾಗದಂತಹ ಕುಂದುಕೊರತೆಗಳು, ಸಂಬಂಧಗಳನ್ನು ಕಳೆದುಕೊಳ್ಳುವುದು, ಇತರರಿಂದ ತುಳಿತಕ್ಕೊಳಗಾಗುವುದು, ಸಾಂಧರ್ಬಿಕ ಶೋಕಗಳು... ಇತ್ಯಾದಿಗಳು. 
ಇಂತಹ ನೋವಿನಲ್ಲಿ ಸಾಮಾನ್ಯವಾಗಿ ಇವುಗಳೆಲ್ಲವನ್ನೂ ದೇವರು ನೀಡಿರುವ ಶಾಪಗಳೆಂದು ದೂರುತ್ತಾರೆ. 
ಅದರೆ ಯಾವ ವಿಷಯಗಳು ನಮ್ಮನ್ನು ಉತ್ತಮತೆಯತ್ತ ಕೊಂಡೊಯ್ಯಲು ಯಾವುದೇ ರೀತಿಯಲ್ಲಿ ಅನುಕೂಲಕರವಾಗಿ‌ ಇರುವುದಿಲ್ಲವೋ ಖಂಡಿತ ಅವುಗಳು ಶಿಕ್ಷೆಗಳಲ್ಲ! 
ಬದಲಾಗಿ ನಮ್ಮ ಅಜ್ಞಾನದಿಂದಲೋ, ಅಸಡ್ಡೆಯಿಂದಲೋ, ನಿರ್ಲಕ್ಷ್ಯದಿಂದಲೋ, ಇತರರು ನಮ್ಮ ಮೇಲೆ ಹಗೆ ತೀರಿಸಿಕೊಳ್ಳುವುದರಿಂದ ಸಂಭವಿಸುವುದಾಗಿದೆ. 
ಕೆಲವೊಮ್ಮೆ ಶಿಕ್ಷೆಗಳಿಂದ‌ ಯಾವುದೇ ಒಳ್ಳೆಯ ಫಲ ಸಿಗದಿರಬಹುದು. ಅಂದ ಮಾತ್ರಕ್ಕೆ ಅದು‌ ಎಲ್ಲರಲ್ಲೂ ಒಂದೇ ವಿಧವಾಗಿ ಇರಲು ಸಾಧ್ಯವಿಲ್ಲ.
ನಮ್ಮ ಬಯಕೆಗಳಿಂದ ಉಂಟಾಗುವ ದೇವರ ವಿರುದ್ಧ ಮಾಡುವ ಅಪರಾಧಗಳಿಗೆ ಅಂತಿಮ ತೀರ್ಪಿದೆ.
ಆದ್ದರಿಂದಲೇ ಶಿಕ್ಷೆ ಎನ್ನುವುದರ ಬಗ್ಗೆ ಎಚ್ಚರಿಕೆಯಿರಬೇಕು.
- ಪಂಚೇಂದ್ರಿಯ ಬಯಕೆಗಳ ನಿಗ್ರಹ.
- ಮಾನಸಿಕ ವೈಪರೀತ್ಯಗಳ ತಡೆ.
- ಆಧ್ಯಾತ್ಮಿಕ ಕಟ್ಟಳೆ, ಅನುಕರಣೆಗಳಲ್ಲಿ ನಿಖರತೆ.
- ಲೌಕಿಕ ಮತ್ತು ಸ್ವರ್ಗೀಯ ಅಪರಾಧಗಳ ನಡುವಿನ ವ್ಯತ್ಯಾಸಗಳ ತಿಳುವಳಿಕೆ.
- ದೈವ ಪ್ರೀತಿ, ಮಾನವ ಪ್ರೀತಿಗಳ ಸ್ಪಷ್ಟವಾದ ನಿಲುವು.
- ಆಂತರಿಕ, ಬಾಹ್ಯ ಫಲಗಳ ಮೂಲ.
ಇಂತಹವುಗಳನ್ನು ಸೂಕ್ತವಾದ ದೃಷ್ಟಿಕೋನದಲ್ಲಿ ಪರಾಮರ್ಶಿಸಿ ತೀರ್ಮಾನಿಸಿಕೊಳ್ಳಬೇಕು. 
ಉತ್ತಮ ಗುರಿಯತ್ತ ಗಮನವಿಟ್ಟು ಮುಂದಡಿಯಿಡುತ್ತಿರುವವರು ಶಿಕ್ಷೆಗಳನ್ನು, ವೈಯಕ್ತಿಕ ಋಣಾತ್ಮಕ ಚಿಂತೆಗಳನ್ನು‌ ಅದಲುಬದಲು ಅನುಕರಿಸಿದೆಯಾದಲ್ಲಿ ನಿರ್ಧಿಷ್ಟವಾದ ಮುನ್ನೋಟವನ್ನು ಕಳೆದುಕೊಳ್ಳುವ ಸಂಭವವಿದೆ. 
ಏಕೆಂದರೆ ಶಿಕ್ಷೆಯಿಲ್ಲದೆ ರಕ್ಷೆಯ ತೇಜಸ್ಸು ಪ್ರಜ್ವಲಿಸದು‌ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದು ವಿಚತ್ರವಾಗಿ ಕಂಡರೂ ಸಹ ವಿಭಿನ್ನ ಅನುಭವಗಳ ಮೂಲಕ ನಮಗೆ ಸಾಬೀತಾಗುವ ಸಾಧ್ಯತೆ ಇದೆ. ಯೇಸುಪ್ರಭುವಿಗೆ ಶಿಲುಬೆಯ ಮರಣದ ಕ್ರೂರ ಶಿಕ್ಷೆ ದೊರೆತಿದ್ದರಿಂದಲೇ ಮಾನವರ ರಕ್ಷಣೆಯಾಯಿತು. ಮನುಜನ ಬದುಕು‌ ಹೊಸ ಹಾದಿಯನ್ನು ಹಿಡಿಯಿತು.
- ರಾಬರ್ಟ್ ಕವನ್ರಾಗ್, ಮೈಸೂರು -


*ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*

*ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*
ನೋವು, ದುಃಖ, ಸಂಕಟ, ಭಯ, ಕಳವಳ, ಕೊರಗು, ಕೀಳರಿಮೆ, ಕೋಪ, ಒಂಟಿತನ, ಅತೃಪ್ತಿ, ಉದ್ವೇಗ, ವ್ಯಥೆಗಳಂತ ನಿರಾಶೆಗೆ ಸಂಬಂಧಪಟ್ಟ ಅಸ್ವಾಭಾವಿಕ ವರ್ತನೆಗಳು ನಮ್ಮನ್ನು ನಿರ್ನಾಮದೆಡೆಗೆ ಕೊಂಡೊಯ್ಯುವ ಮಾದಕ ವಸ್ತುಗಳಿದ್ದಂತೆ.
ನಮ್ಮ ಮಾನಸಿಕ, ಆಧ್ಯಾತ್ಮಿಕ ವೈರಿಯು ಮಾನುಷ ಗುಣದವನನ್ನು ಹೆಸರಿಲ್ಲದಂತೆ ಅಳಿಸಲು, ಇವುಗಳನ್ನು ತಿಳಿಯಾದ ಮನಸ್ಸಿನ್ನೊಳಗೆ ಅಘಾತಕಾರಿ ವಿಷಜಂತುವಾಗಿ ಉಲ್ಬಣಗೊಳ್ಳಲು ಬಿಡುತ್ತಾನೆ.
ಆರಂಭದಲ್ಲಿ ಸರಾಗವಾಗಿ ಸ್ವೀಕರಿಸುವ ವ್ಯಕ್ತಿ, ತನ್ನನ್ನು ತಾನು ಕಾಪಾಡಿಕೊಳ್ಳುತ್ತೇನೆ ಎಂಬ ಪೊಳ್ಳು ಭರವಸೆಯಲ್ಲಿ ಇರುತ್ತಾನೆ. ಆದರು ಅನುಮಾನಪಡುತ್ತಲೇ ಒಳಗೊಳಗೆ ಮುದುಡುತ್ತಾನೆ.
ಕ್ರಮೇಣ ವ್ಯಾಪಿಸತೊಡಗುವಾಗ ಇಂದಲ್ಲ ನಾಳೆ ತನ್ನಿಂದ ಅದು ತೊಲಗುತ್ತದೆ ಎಂದುಕೊಂಡರೂ, ಒಳಗೊಳಗೆ ಅಳುಕುತ್ತಾನೆ.
ಮುಂದೆ ಒಂದು ದಿನ ಸಂಪೂರ್ಣವಾಗಿ ಆವರಿಸುವಾಗ ಕಳವಳ ಪಡುತ್ತಾನೆ. ಅಳು, ನಿರಾಶೆ, ಅಪನಂಬಿಕೆ, ಮರೆವು, ಶೂನ್ಯತೆ, ಸಾವಿನ ಚಿಂತೆಗಳು ಅವನಲ್ಲಿ ಅಸ್ತಿತ್ವವನ್ನು ಪಡೆಯತೊಡಗುತ್ತವೆ.
ಇದರಿಂದ ಅನೇಕರು ತಮ್ಮನ್ನೆ ತಾವು ಕಳೆದುಕೊಂಡು ಪ್ರಾಪಂಚಿಕತೆಯನ್ನು ಮರೆಯಬಹುದು. ಅನೇಕ ಪ್ರತಿಭಾನ್ವಿತರು ಆಸಕ್ತಿ ಕಳೆದುಕೊಂಡು ಮೌನಿ ಆಗಬಹುದು. ಇನ್ನೂ ಅನೇಕರು ತಮ್ಮನ್ನೇ ಈ ಲೋಕದಿಂದ ಬೇರ್ಪಡಿಸಿಕೊಳ್ಳಲು ತವಕಿಸಿ ಸೋಲಬಹುದು ಅಥವಾ ಇಲ್ಲವಾಗಿಸಿಕೊಳ್ಳಬಹುದು.
ಇವುಗಳಿಗೆಲ್ಲ ಕಾರಣ ವೈರಿ ಬೀಸುವ ಋಣಾತ್ಮಕ ಬಲೆಯೊಳಗೆ ಅರಿವಿಲ್ಲದೆ ತಮ್ಮನ್ನೇ ಬಲಿಯಾಗಿಸಿಕೊಳ್ಳುವುದು!
ಪುಣ್ಯ ಪುರುಷರು, ಸಾಧಕರು, ಮೇಧಾವಿಗಳು, ಬುದ್ದಿವಂತ ಸುಗುಣರುಗಳಂತಹ ಯಾರನ್ನೂ ಇವು ಬಿಟ್ಟಿಲ್ಲ. ಅಷ್ಟೇ ಏಕೆ ನಮ್ಮ ಪ್ರಭುವನ್ನು ಸಹ ಕಾಡಿಸಿತು.
ಇವುಗಳನ್ನು ಜಯಿಸಿದರೆ ಮಾತ್ರವೇ ಯಶಸ್ಸು, ನೆಮ್ಮದಿ ನಮಗೆ ಕಟ್ಟಿಟ್ಟ ಬುತ್ತಿ.
ಆದ್ದರಿಂದ ಕಣ್ಣು ಮಂಜಾಗುವುದರ ಮುನ್ನ, ಕಿವಿ ಮಂದವಾಗುವ ಮುನ್ನ, ಶರೀರ ಚೈತನ್ಯಹೀನವಾಗುವುದರ ಮುನ್ನ, ಜ್ಞಾನ ಕದಡಿ ಹೋಗುವ ಮುನ್ನ, ಅಭಿಮಾನ ಕಳೆದೋಗುವ ಮುನ್ನ, ನಮ್ಮೊಳಗಿನ ದೃಢತೆ ಕುಂದಿ ಹೋಗುವ ಮುನ್ನ ಕೆಲ ನಿಮಿಷಗಳನ್ನಾದರೂ ನಮ್ಮನ್ನು ನಾವು ಪ್ರಸ್ತುತದಲ್ಲಿ ಅವಲೋಕಿಸಬೇಕು.
ಇಲ್ಲದಿದ್ದರೆ ನಿರಾಶೆ ನಮ್ಮನ್ನು ಬಂಧಿಸಿ ನಿರ್ನಾಮಗೊಳಿಸಬಹುದು! ವೈದ್ಯಕೀಯದಲ್ಲಿ ಆಂತರ್ಯದ ಬೆಂಬಲವನ್ನು ಪ್ರಥಮವಾಗಿ ಪರೀಕ್ಷಿಸುತ್ತಾರೆ.
ಅದು ಇದ್ದರೆ ರೋಗಿಯ ಅರ್ಧ ಕಾಯಿಲೆ ಗುಣವಾದಂತೆಯೇ ಸರಿ. ಇದಕ್ಕಾಗಿಯೇ ರೋಗಿ ಸ್ಪಂದಿಸುತ್ತಿದ್ದಾನೆ ಎಂದು ಹೇಳುವುದು.
ಹಾಗೆಯೆ ನಮ್ಮ ಮೇಲೆ ನಕರಾತ್ಮಕ ತಲ್ಲಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಅರಿವು ಮೂಡುವಾಗಲೇ ಎಚ್ಚರವಹಿಸಬೇಕು. ಕೆಲವೊಮ್ಮೆ ನಮಗರಿವಿಲ್ಲದಿದ್ದರು ಇತರರು ಗುರುತಿಸಿರುತ್ತಾರೆ. ಅವರು ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಅದನ್ನು ಉದಾಸೀನ ಮಾಡದೆ ಅದರಿಂದ ಬಿಡಿಸಿಕೊಳ್ಳುವ ಮಾರ್ಗ ಹುಡುಕಬೇಕು.
ಹೆದರಬೇಕಾದ ಪ್ರಸಂಗವಿಲ್ಲ. ಎಲ್ಲಾ ಸಂಕಷ್ಟಗಳಿಗೂ ಪರಿಹಾರ ಇದ್ದೇಇದೆ. ಇದು ಪ್ರಕೃತಿ ನಿಯಮ.
ಎಲ್ಲರಿಗೂ ಒಬ್ಬರು ಸಂಗಾತಿ ಇದ್ದೇ ಇರುತ್ತಾರೆ. ಇದು ದೇವರ ನಿಯಮ.
ದೈವಿಕತೆ ಎಂಬುದು ಅಗೋಚರ ಶಕ್ತಿ. ವಿಶ್ವಾಸ ಇರಬೇಕು. ಯಾವುದೇ ಕಾರಣಕ್ಕೂ ನಿರಾಶೆಗೆ ಒಳಗಾಗಬಾರದು.
ಸ್ವಾಭಿಮಾನ, ಅಹಂ, ತಮಗೆ ಕುಂದು ಬರಬಹುದೆಂಬ ಚಿಂತೆ, ಹಠ, ಅತಿಯಾದ ಕರ್ತವ್ಯ ಪ್ರಜ್ಞೆಗಳಂತವುಗಳನ್ನು ತೊರೆದು ನಮ್ಮನ್ನು ನಾವು ಉಳಿಸಿಕೊಳ್ಳಲು ಅಗೋಚರ ದೇವಬಲದಲ್ಲಿ, ನಮ್ಮೊಳಗಿನ ಅಂತರಾಳದ ಸಹವಾಸದಲ್ಲಿ ವಿಶ್ವಾಸವಿಡಬೇಕು. ಮುಖ್ಯವಾಗಿ, ನಮಗೆ ದೊರಕುವ ಸಮಯವನ್ನು ಶೂನ್ಯತೆಯಲ್ಲಿ ಹರಿದಾಡಲು ಬಿಡಬಾರದು!! ಏಕೆಂದರೆ ನಾವಿದ್ದರೇನೆ ಈ ಪ್ರಪಂಚ!!!

- ರಾಬರ್ಟ್ ಕವನ್ರಾಗ್ - 

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...