:"ಪ್ರಥಮ-ಪೂರ್ಣ" ನಡುವಿನ ಸಂಧಾನ:
ಅದೊಂದು ಕೊನೆಯುಸಿರು ಇರುವವರೆಗೂ ಕಣ್ಣೆದುರು ಕಾಣುವ ಘಟನೆ.
ಮೂವತ್ತು ವರ್ಷಗಳ ಹಿಂದೆ ಬಯಸದೇ ಬಂದ ಭಾಗ್ಯದಂತೆ ಕ್ರೈಸ್ತ ಭಕ್ತಿಗೀತೆಗಳ ಸಾಹಿತ್ಯ-ಸಂಗೀತ-ಗಾಯಕನಾಗಿ ಧ್ವನಿಮುದ್ರಣದ ಸೇವೆಗೆ ಅವಕಾಶ ದೊರೆತ ರೋಮಾಂಚನದ ಸಮಯ.
ಇದರಿಂದ ಮುಂದೆ ಗಳಿಸಬಹುದಾದ ಕೀರ್ತಿಯೊಂದಿಗೆ ಬರಬಹುದಾದ ಎಲ್ಲದರ ಕಲ್ಪನೆಯ ಕನಸೊತ್ತುಕೊಂಡು ಸಿದ್ಧವಾಗಿದ್ದೆ. ಮನದೊಳಗೆ ಹಗುರವಾದ ಸಂಚಾರವಿತ್ತು.
ಆದರೆ ಹೊರಡುವಾಗ ಮನೆಯೊಳಗೆ ಭಾರದ ನೋಟಗಳ ಮುಜುಗರವಿತ್ತು. ಈಗ ಈತ ಹೋಗಲೇಬೇಕಾ? ಎಂಬ ಪ್ರಶ್ನೆಯನ್ನು ಕೇಳುತ್ತಿರುವಂತಹ ಬೀಳ್ಕೊಡುಗೆ ಇತ್ತು. ನನ್ನಲ್ಲು ಕನಸಿಗಿಂತ ಬಿಟ್ಟು ಹೋಗಬಹುದೆಂಬ ಕಸಿವಿಸಿಯ ಹಿಂಸೆ ಮುಳ್ಳಾಗಿ ತೊಡರುತಿತ್ತು.
ಕಾರಣ ನನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದ, ನನ್ನ ಚಟುವಟಿಕೆಗಳ ಬಗ್ಗೆ ಹೆಮ್ಮೆ ಪಡುತ್ತಿದ್ದ, ನನ್ನನ್ನು ಯಾವಾಗಲೂ ತನ್ನ ನಂಬಿಕೆಯಲ್ಲಿ ಬಂಧಿಸಿಕೊಂಡಿದ್ದ ನನ್ನ ಸುಮಾರು 104 ವಯಸ್ಸಿನ ಮುದ್ದು ಅಜ್ಜಿ ಈ ಲೋಕವನ್ನು ಬಿಟ್ಟು ಹೋಗಲು ಸಿದ್ಧವಾಗಿದ್ಧರು.
ಇತ್ತ ಆರಂಭವಾದ ಕನಸಿನ ಸವಿ. ಅಲ್ಲಿ ಕೊನೆಗೊಳ್ಳುತ್ತಿದ್ದ ಉಸಿರಿನ ಗವಿ.
ನಾನು ಕತ್ತರಿಯಲ್ಲಿ ಸಿಕ್ಕಿಕೊಂಡಿರಲಿಲ್ಲ. ಬದಲಾಗಿ ಕತ್ತಲಲ್ಲಿ ಸೆಳೆದು ಗೀಳಿಡುವ ಕ್ರೂರತೆಯ ಮಂದಗತಿ.
ಸಂಕಟ-ಸಂತಸಗಳ ನಡುವೆ ಅವಿತುಕೊಂಡ ಹೃದಯದ ಬಡಿತ ಮೌನ ನಿರ್ಧಾರದ ಕಣ್ಣೀರಿಗೂ ಅವಕಾಶ ನೀಡದೆ ಸುಮ್ಮನ್ನಿತ್ತು.
ಅಳಲು ಆನಂದ ಬಿಡದು, ನಗುವುದಕ್ಕೆ ನೋವು ಬಿಡುತ್ತಿಲ್ಲ.
ಭಾರವಾಗಿದ್ದರೂ ಚಂದಿರನ ಮೇಲೆ ಮುಂದಡಿಯಿಡುವ ಸ್ಥಿತಿಯಂತೆ ಮುದುಡಿ ಮಲಗಿದ್ದ ಸ್ತಬ್ದತೆಯೆಡೆಗೆ ಪಯಣಿಸುತ್ತಿದ್ದ ದೇಹವನ್ನು ಸ್ಪರ್ಶಿಸಿ, ಹೊರ ಅಡಿ ಇಟ್ಟಾಯ್ತು.
ಮುಂದೆ......!?
ಇಂತಹ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರ ಬಹು ಕಠಿಣ.
ಕರ್ತವ್ಯದೆಡೆ ಹೋಗದಿದ್ದರೆ ಅಗತ್ಯತೆ ಬಯಸುವವರು ವಿರುದ್ಧವಾಗಬಹುದು.
ಮಮತೆಯೆಡೆ ನೋಟ ಹರಿಸದಿದ್ದರೆ ಕಲ್ಲು ಹೃದಯದ ಅಸಹ್ಯ ಜೀವಿ ಎಂದು ಕರೆಸಿಕೊಳ್ಳುವ ಅವಮಾನ.
ಆರಂಭವಾಗಬೇಕಾಗಿರುವುದು, ಅಂತ್ಯಗೊಳ್ಳುವುದು ಬದಲಾಗಬಹುದು, ತಡವಾಗಬಹುದು.
ಆದರೆ ಇಂತಹ ಸಮಯದಲ್ಲಿ ಯಾವುದನ್ನೂ ಬಿಟ್ಟುಗೊಡದೆ ಸಮತೋಲನ ಸ್ಥಿತಿಗೆ ತರುವುದು ಪ್ರಸ್ತುತತೆಗೆ ಅರ್ಥ ಕೊಡುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತೊಳಲಾಡುವ ಅನುಭವ ಎಲ್ಲರಿಗೂ ಇದೆ.
ಬರಲಿರುವ ವೇದನೆಯನ್ನು ನೆನೆದು ರಕ್ತದ ಬೆವರನ್ನು ಸುರಿಸುತ್ತಾ ದೇವರಲ್ಲಿ ಯಾಚಿಸಿದ ಪ್ರಭುವಿನ ಮನಸ್ಥಿತಿ ಹೇಗಿದ್ದಿರಬಹುದು???!
ಅಂತರಾತ್ಮದ ಮಾತಿಗೆ ಕಿವಿಗೊಡುವವನಿಗೆ ಪ್ರಭುವು ಸೂಕ್ತವಾದ ತಿಳುವಳಿಕೆ ನೀಡಬಲ್ಲರು.
ಕರ್ತವ್ಯ - ಮಮತೆ ಯಾವುದನ್ನೂ ಕಳೆದುಕೊಳ್ಳಲು ಬಿಡರು.
ಅಜ್ಜಿ ಅದೇ ದಿನ ಇಹಲೋಕ ತ್ಯಜಿಸಿದರು. ಅವರು ಮೌನದಲ್ಲಿ ಇರುವಾಗಲೇ ನನ್ನ ದನಿಯು ಪ್ರಭುವನ್ನು ಹಾಡಿ ಮಹಿಮೆಪಡಿಸಿದ್ದು ಮುದ್ರಣಗೊಂಡು ದಾಖಲೆಯಾಗಿದೆ.
ಆದರೆ ಆ ಕಹಿಸಿಹಿ ಎರಡನ್ನೂ ಕಂಡಿದ್ದೇನೆ. ನೆನಪಿನಲ್ಲಿ ಉಳಿಸಿಕೊಂಡಿದ್ದೇನೆ.
ಅದರಿಂದ ಶ್ರೇಷ್ಟ ಪಾಠವನ್ನು ಕಲಿತ್ತಿದ್ದೇನೆ. ಹೇಗೆಂದರೆ ಪ್ರಥಮ-ಪರಿಪೂರ್ಣತೆ ನಡುವಿನ ಸಂಬಂಧದಲ್ಲಿ ಸಂಧಾನ ಮಾಡಿಕೊಂಡಿದ್ದೇನೆ. ಕೆಲವೊಮ್ಮೆ ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಕಿವಿಗೊಡಬಾರದು.
ಬೇರು ಧರೆಯಲ್ಲಿ, ಕೊಂಬೆಗಳು ಹೊರಪ್ರಪಂಚದಲ್ಲಿ ತನ್ನನ್ನು ತಾನೂ ಬೆಳೆಯಗೊಡುವಂತೆ ನಾವು ಬೆಳೆಯಬೇಕು.
- ರಾಬರ್ಟ್ ಕವನ್ರಾಗ್, ಮೈಸೂರು -
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ