ಮಂಗಳವಾರ, ಅಕ್ಟೋಬರ್ 13, 2020

 'ನೆನಪುಗಳ ಮಡಿಲಿನಲಿ ಪಿಸುಮಾತುಗಳು!'



ಆ ಕ್ಷಣಗಳು ಮತ್ತೆ ಬರುತ್ತವೆಯೇ ಎಂಬ ಸವಿಯ ಬಯಸುವ ಮಿಡಿತಗಳು ಅನೇಕ.
ಆ ಆತಂಕಕಾರಿ ಗಳಿಗೆಯು ವೈರಿಗೂ ಬಾರದಿರಲಿ ಎಂಬ ತುಡಿತಗಳು ಅಂಕೆಗೆ ಸಿಗದಷ್ಟು ಅಪಾರ.
ಜೀವನದಲಿ ಮುಟ್ಟಿ ಬಂದ ಅನುಭವಗಳು ನೆನಪುಗಳ ಸರಪಳಿಯಾಗಿಯೋ ಅಥವಾ ಚೆಂದದ ಮಣಿಮಾಲೆಗಳಾಗಿಯೂ ಕೊರಳಲಿ ಸದಾ ತೂಗುತ್ತಿರುತ್ತವೆ.
ಕೊರಗುತ್ತಾ ಸೊರಗುವ ಮನಸ್ಸುಗಳೊಂದಿಗೆ, ಸುಖದ ಸವಿಯಲ್ಲಿ ಆನಂದಿಸುವ ಹೃದಯವು ಭುಜದ ಮೇಲೆ ಕೈಹಾಕಿ ಹೆಜ್ಜೆ ಹಾಕುತ್ತವೆ.
ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿದಿನದ ಗಂಟೆಯಲ್ಲೂ ನೆನಪುಗಳ ಕಂಪನದಲಿ ಅನುಮಾನದಲ್ಲಿಯೆ ಸಂಚರಿಸುತ್ತಾನೆ.
ನೋವಿರಲಿ ನಲಿವಿರಲಿ ತನ್ನೊಳಗಿನ ಬದುಕಿನ ಚಿತ್ರಣಗಳನ್ನು ಇತರರ ಮನದ ಪರದೆಗಳ ಮೇಲೆ ರೂಪಿಸಲು ತವಕಿಸುತ್ತಲೇ ಇರುತ್ತಾನೆ.
ಆನಂದಬಾಷ್ಪ ಚಿಮ್ಮಿಸುವ ಘಟನೆಗಳನ್ನು ಅಪ್ಪುಗೆಯಲ್ಲಿ ಚಿತ್ರಿಸಿದರೆ, ಮರುಗುವ ಕಣ್ಣೀರಿನ ಮಂಜಾಗಿಸುವ ಅನುಭವಗಳನ್ನು ಮಡಿಲಿನ ಮಡಿಕೆಯೊಳಗೆ ಅವಿತ್ತಿಡಲು ತವಕಿಸುತ್ತಾನೆ.
ಅನುಭವಗಳ ಅನುಬಂಧಿತಗಳಿಂದ ಮೂಡುವ ಅಕ್ಷರಗಳ ಪದಪುಂಜಗಳನ್ನು ಪ್ರೀತಿಸುವರೊಂದಿಗೆ, ಪ್ರೇಮದಲಿ ಮುತ್ತಿಡುವವರೊಂದಿಗೆ, ಒಲವಿನ ಬಾಂಧವ್ಯಗಳೊಂದಿಗೆ ಪೇರಿಸಿಟ್ಟು ನೆಮ್ಮದಿಯಲ್ಲಿ ಪವಡಿಸುವವರು ನಿಟ್ಟಿಸಿರು ಬಿಡುತ್ತಾರೆ.
ಇಂತಹದ್ದೇ ಪದಪುಂಜಗಳನ್ನುಕೇಳುವವರು ಕಾಣದಿದ್ದಾಗ ಅದೇ ಕೊರಗಿನಲ್ಲಿ ಅನೇಕರು ಅಸಹನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ದುಃಖಿಸುತ್ತಾರೆ.
ಇವರು ತಮ್ಮ ಅಂತಿಮ ಬದುಕಿನ ದಿನಗಳನ್ನು ಏಕಾಂತದಲ್ಲಿ ಪೇಚಾಡುತ್ತಲೇ ಕಳೆಯುತ್ತಾರೆ. ಕೊನೆಗಾಲದಲ್ಲಾದರೂ ನೆನಪುಗಳ ಮಡಿಲಿನಲಿ ಪಿಸುಮಾತುಗಳನ್ನು ಆಲಿಸುವ ಅವಕಾಶ ದೊರಕಲಿ ಎಂಬ ಆಶಾಭಾವದಿಂದ ದಿನವನ್ನು ದೂಡುತ್ತಾರೆ.
ಅನೇಕರು ಹುಚ್ಚರಂತೆ ನೆಮ್ಮದಿಯನ್ನು ಹುಡುಕಿ ಹೋಗುವುದು ಈ ಕಾರಣದಿಂದಲೇ!
ಅನೇಕ ಬಾರಿ ಇಂತವರು ಶೂನ್ಯತೆಯಲ್ಲಿ ಖಿನ್ನರಾಗುವರು. ತಮ್ಮನ್ನೇ ಕಳೆದುಕೊಳ್ಳುತ್ತಾರೆ.
ಇದಕ್ಕೆ ಸಿಲುಕಬಾರದೆಂದರೆ ಅವರಿಗೆ,
* ಪ್ರೇಮಿಸುವ ಸಂಗಾತಿ ಇರಬೇಕು.
* ಪ್ರೀತಿಸುವ ಒಡಹುಟ್ಟಿದವರು, ಬಂಧುಬಳಗವಿರಬೇಕು.
* ಒಲವಿನ ಗೆಳೆತನದ ಪ್ರತ್ಯಕ್ಷ ಬೆನ್ನೆಲುಬಿರಬೇಕು.
* ಆತ್ಮೀಯತೆಯಲ್ಲಿ ಅಪ್ಪುವ ಪರಿಚಿತರಿರಬೇಕು.
* ಪ್ರೇರಣೆಯ ನಿಸ್ವಾರ್ಥ ನಗುವಿನ ಸಹಪಾಠಿ ಸಹೋದ್ಯೋಗಿಗಳಿರಬೇಕು.
* ಸಹಕರಿಸುವ ಉದಾರ ಹೃದಯವಂತರಿರಬೇಕು.
ಇವೆಲ್ಲವನೂ ಒಟ್ಟಿಗೆ ಪಡೆಯಲು ಅಸಾಧ್ಯವೆನಿಸಿದರೂ ಇದರಲ್ಲಿ ಒಂದಾದರು ಸಿಗುವಂತಿರಬೇಕು.
ಒಂದು ವೇಳೆ ಇದ್ಯಾವುದು ನಮ್ಮ ಹತ್ತಿರ ಬರದಿದ್ದಾಗ ಇವುಗಳನ್ನೆಲ್ಲವನ್ನೂ ಮೀರಿಸುವ ಪ್ರಭುವಿನ ಕರುಣೆಯ ಕರಗಳಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿರಬೇಕು.
ಪ್ರಭುವಿನಲ್ಲಿ ನಂಬಿಕೆಯಿರಬೇಕು.
ಆಗ ಮಮತೆಯ ತಾಯಿಯ ಮಡಿಲನ್ನೂ ಮೀರಿಸುವ ದೈವತ್ವ ಸಮಾಧಾನದ ಮಡಿಲಿನಲಿ
ನೆನಪುಗಳ ಸವಿ ಮಾತುಗಳನ್ನಾಡುವ ಮಹಾ ಭಾಗ್ಯ ನಮಗೆ ದೊರಕುತ್ತದೆ.


- ರಾಬರ್ಟ್ ಕವನ್ರಾಗ್, ಮೈಸೂರು -

   *ತಿರುಗೊ ಭೂಮಿಯಲಿ ಬದಲಾವಣೆ ಸಹಜ ಪ್ರಕ್ರಿಯೆ*

ಮುದುಡಿದ ಹೂಗಳೆಲ್ಲವೂ ಸೋಲನ್ನು ಅನುಭವಿಸಿ ಸೊರಗಿದೆ ಎನ್ನುವುದು ಖಂಡಿತ ಮೂರ್ಖತನ. ಬರಿದಾದ ಜೇನುಗೂಡಿನ ಮೇಣವು ಪ್ರಯೋಜನವಿಲ್ಲದ ಕಸದ ಗೂಡು ಎಂದು ಅಲ್ಲಗಳೆಯುವುದು ಅಜ್ಞಾನದ ದುಸ್ಥಿತಿ. ಹಾಗೆಯೇ ದುಃಖದಲ್ಲಿ ಮುಳುಗಿರುವ, ಬಡತನದಲ್ಲಿ ನಲುಗಿರುವ, ತಾನು ಯೋಗ್ಯನಲ್ಲ ಎನ್ನುವವರೆಲ್ಲಾ ಯಾವುದಕ್ಕೂ ಬಾರದವರೆಂದು ತಿರಸ್ಕಾರದಿಂದ ನೋಡುವುದು ತರವಲ್ಲ. ಅಜಾನುಬಾಹು ವ್ಯಕ್ತಿಗಳೇ ಆಗಲಿ, ಹೆಳವನೇ ಆಗಲಿ ಒಬ್ಬರಿಗೊಬ್ಬರನ್ನು ಹೋಲಿಸಿ ಅವರ ಅರ್ಹತೆಯನ್ನು ಪ್ರಕಟಪಡಿಸಲು ಅಸಾಧ್ಯ.

ಇಂದಿನ ವೈಜ್ಞಾನಿಕತೆಯ ವೇಗದ ಬದುಕಿಗೆ ಸರಿಗಟ್ಟಿ ನಿಲ್ಲಲ್ಲು ಮಾನವರಾದ ನಾವು ಮಿತಿಮೀರಿ ಸಾಹಸ ಪಡಬೇಕಾಗಿದೆ. ವ್ಯತಿರಿಕ್ತವಾಗಿ ಸಮಾಜದಲ್ಲಿ ಸಮಂಜಸವಲ್ಲದ ವಿಚಾರಗಳು ಗೋಚರಿಸುತ್ತಿವೆ.
ಈತ ಏನು ಬೇಕಾದರೂ ಸಾಧಿಸಬಲ್ಲ, ಮಾಡಬಲ್ಲ ಎಂದು ಕೆಲ ವ್ಯಕ್ತಿಗಳನ್ನು ನೋಡಿದಾಗ ಅನ್ನಿಸುತ್ತದೆ. ಆದರೆ ಅಂತಹವರ ಗುಣ, ನಡತೆ, ಬದುಕಿನ ಬಗ್ಗೆ ತಿಳಿದುಕೊಳ್ಳಲು ಹೋದಾಗ ವಿಚಿತ್ರ ಅನ್ನಿಸುತ್ತದೆ. ಕೆಲವೊಮ್ಮೆ ನೋವು, ಸಂಕಟ, ಕೋಪವೂ ಕಾಣಿಸಿಕೊಳ್ಳುತ್ತದೆ.
ಏಕೆಂದರೆ ಅವರು ಸೋಂಬೇರಿ, ಸ್ವಾರ್ಥಿ, ಭಯ, ಕೀಳರಿಮೆಗಳಿಂದ ತುಂಬಿದವರಾಗಿ ಬದುಕಿನಲ್ಲಿ ಯಶಸ್ಸನ್ನು ಕಾಣದಿರುತ್ತಾರೆ.
ಅಂಗವಿಕಲಕರು, ದೀನರು, ಬಡವರು, ನೊಂದವರು, ಕುರೂಪಿಗಳು, ಅಸಡ್ಡೆಗೆ ಒಳಗಾದವರು ನಮ್ಮ ನಡುವೆ ಅನೇಕರಿದ್ದಾರೆ.
ಅವರಲ್ಲಿ ಅನೇಕರು ಯಾರಿಗೂ ಅವಲಂಬಿತರಾಗದೆ ತಮ್ಮ ಮೇಲೆ ಅಪಾರವಾದ ನಂಬಿಕೆ ಇಟ್ಟಿರುತ್ತಾರೆ. ತಮ್ಮಲ್ಲಿರುವ ಹೀನತೆಯನ್ನು ಮರೆತು ಸ್ವಾಭಿಮಾನಿಗಳಾಗಿ ಧನಾತ್ಮಕ ಚಿಂತನೆಗಳಿಂದ ಬದುಕಲು ಪ್ರಯತ್ನಿಸುತ್ತಾರೆ.
ಸಾಮಾನ್ಯ ವ್ಯಕ್ತಿಗಳು ಸಾಧಿಸಲಾರದನ್ನು ಇಂತವರು ಸಾಧಿಸಲು ಶ್ರಮಿಸಿತ್ತಾರೆ.
ಸಾಧಿಸಿ ತೋರಿಸುತ್ತಾರೆ.
ರಾಜಕೀಯ ರಂಗದಲ್ಲೇ ಆಗಲಿ, ಸಿನಿಮಾರಂಗದಲ್ಲಿಯೇ ಆಗಲಿ, ಕಲಾರಂಗದಲ್ಲೇ ಆಗಲಿ, ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲೇ ಆಗಲಿ, ಧಾರ್ಮಿಕ ಕ್ಷೇತ್ರಗಳಲ್ಲೇ ಆಗಲಿ.... ಬುದ್ಧಿವಂತರು, ರೂಪವಂತರು, ಶಕ್ತಿವಂತರು ಮಾತ್ರವೇ ಇದ್ದಾರೆಯೇ? ಯೋಗ್ಯತೆಯೇ ಇಲ್ಲ ಎನ್ನುವವರೂ ತಾರೆಗಳಂತೆ ಮಿನುಗುತ್ತಿದ್ದಾರೆ.
ಅಂದರೆ ಪ್ರತಿಭೆ, ಚಾಣಾಕ್ಷತೆ,‌ ಶ್ರದ್ದೆ, ಶ್ರಮ, ಏಕಾಗ್ರತೆ, ಛಲ, ಪ್ರಾಮಾಣಿಕ ಪ್ರಯತ್ನಗಳು ಸಮಾಜದಲ್ಲಿ ಎಂತಹ ವ್ಯಕ್ತಿಯನ್ನೇ ಆಗಲಿ ಒಂದು ಉತ್ತುಂಗ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಧರೆಯು ಸದಾ ತಿರುಗುತ್ತಾ ಅನೇಕ ಮಾರ್ಪಾಡಿಗೆ ಕಾರಣವಾಗುವಂತೆ ನಾವೂ ಸಹ ಸದಾ ಚಲನೆಯಲ್ಲಿದ್ದರೆ ಯಶಸ್ಸಿನ ಮೇಲ್ಮಟ್ಟಕ್ಕೆ ತಲುಪಬಹುದು.
ದೇವರ ಅನುಗ್ರಹ ಸದಾ ಇದೆ.


- ರಾಬರ್ಟ್ ಕವನ್ರಾಗ್, ಮೈಸೂರು -

.....ಕರ್ತವ್ಯ - ಮಮತೆ.....

 :"ಪ್ರಥಮ-ಪೂರ್ಣ" ನಡುವಿನ ಸಂಧಾನ:



ಅದೊಂದು ಕೊನೆಯುಸಿರು ಇರುವವರೆಗೂ ಕಣ್ಣೆದುರು ಕಾಣುವ ಘಟನೆ.
ಮೂವತ್ತು ವರ್ಷಗಳ ಹಿಂದೆ ಬಯಸದೇ ಬಂದ ಭಾಗ್ಯದಂತೆ ಕ್ರೈಸ್ತ ಭಕ್ತಿಗೀತೆಗಳ ಸಾಹಿತ್ಯ-ಸಂಗೀತ-ಗಾಯಕನಾಗಿ ಧ್ವನಿಮುದ್ರಣದ ಸೇವೆಗೆ ಅವಕಾಶ ದೊರೆತ ರೋಮಾಂಚನದ ಸಮಯ.
ಇದರಿಂದ ಮುಂದೆ ಗಳಿಸಬಹುದಾದ ಕೀರ್ತಿಯೊಂದಿಗೆ ಬರಬಹುದಾದ ಎಲ್ಲದರ ಕಲ್ಪನೆಯ ಕನಸೊತ್ತುಕೊಂಡು ಸಿದ್ಧವಾಗಿದ್ದೆ. ಮನದೊಳಗೆ ಹಗುರವಾದ ಸಂಚಾರವಿತ್ತು.
ಆದರೆ ಹೊರಡುವಾಗ ಮನೆಯೊಳಗೆ ಭಾರದ ನೋಟಗಳ ಮುಜುಗರವಿತ್ತು. ಈಗ ಈತ ಹೋಗಲೇಬೇಕಾ? ಎಂಬ ಪ್ರಶ್ನೆಯನ್ನು ಕೇಳುತ್ತಿರುವಂತಹ ಬೀಳ್ಕೊಡುಗೆ ಇತ್ತು. ನನ್ನಲ್ಲು ಕನಸಿಗಿಂತ ಬಿಟ್ಟು ಹೋಗಬಹುದೆಂಬ ಕಸಿವಿಸಿಯ ಹಿಂಸೆ ಮುಳ್ಳಾಗಿ ತೊಡರುತಿತ್ತು.
ಕಾರಣ ನನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದ, ನನ್ನ ಚಟುವಟಿಕೆಗಳ ಬಗ್ಗೆ ಹೆಮ್ಮೆ ಪಡುತ್ತಿದ್ದ, ನನ್ನನ್ನು ಯಾವಾಗಲೂ ತನ್ನ ನಂಬಿಕೆಯಲ್ಲಿ ಬಂಧಿಸಿಕೊಂಡಿದ್ದ ನನ್ನ ಸುಮಾರು 104 ವಯಸ್ಸಿನ ಮುದ್ದು ಅಜ್ಜಿ ಈ ಲೋಕವನ್ನು ಬಿಟ್ಟು ಹೋಗಲು 😔 ಸಿದ್ಧವಾಗಿದ್ಧರು.
ಇತ್ತ ಆರಂಭವಾದ ಕನಸಿನ ಸವಿ. ಅಲ್ಲಿ ಕೊನೆಗೊಳ್ಳುತ್ತಿದ್ದ ಉಸಿರಿನ ಗವಿ.
ನಾನು ಕತ್ತರಿಯಲ್ಲಿ ಸಿಕ್ಕಿಕೊಂಡಿರಲಿಲ್ಲ. ಬದಲಾಗಿ ಕತ್ತಲಲ್ಲಿ ಸೆಳೆದು ಗೀಳಿಡುವ ಕ್ರೂರತೆಯ ಮಂದಗತಿ.
ಸಂಕಟ-ಸಂತಸಗಳ ನಡುವೆ ಅವಿತುಕೊಂಡ ಹೃದಯದ ಬಡಿತ ಮೌನ ನಿರ್ಧಾರದ ಕಣ್ಣೀರಿಗೂ ಅವಕಾಶ ನೀಡದೆ ಸುಮ್ಮನ್ನಿತ್ತು.
ಅಳಲು ಆನಂದ ಬಿಡದು, ನಗುವುದಕ್ಕೆ ನೋವು ಬಿಡುತ್ತಿಲ್ಲ.
ಭಾರವಾಗಿದ್ದರೂ ಚಂದಿರನ ಮೇಲೆ ಮುಂದಡಿಯಿಡುವ ಸ್ಥಿತಿಯಂತೆ ಮುದುಡಿ ಮಲಗಿದ್ದ ಸ್ತಬ್ದತೆಯೆಡೆಗೆ ಪಯಣಿಸುತ್ತಿದ್ದ ದೇಹವನ್ನು ಸ್ಪರ್ಶಿಸಿ, ಹೊರ ಅಡಿ ಇಟ್ಟಾಯ್ತು.
ಮುಂದೆ......!?
ಇಂತಹ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರ ಬಹು ಕಠಿಣ.
ಕರ್ತವ್ಯದೆಡೆ ಹೋಗದಿದ್ದರೆ ಅಗತ್ಯತೆ ಬಯಸುವವರು ವಿರುದ್ಧವಾಗಬಹುದು.
ಮಮತೆಯೆಡೆ ನೋಟ ಹರಿಸದಿದ್ದರೆ ಕಲ್ಲು ಹೃದಯದ ಅಸಹ್ಯ ಜೀವಿ‌ ಎಂದು ಕರೆಸಿಕೊಳ್ಳುವ ಅವಮಾನ.
ಆರಂಭವಾಗಬೇಕಾಗಿರುವುದು, ಅಂತ್ಯಗೊಳ್ಳುವುದು ಬದಲಾಗಬಹುದು, ತಡವಾಗಬಹುದು.
ಆದರೆ ಇಂತಹ ಸಮಯದಲ್ಲಿ ಯಾವುದನ್ನೂ ಬಿಟ್ಟುಗೊಡದೆ ಸಮತೋಲನ ಸ್ಥಿತಿಗೆ ತರುವುದು ಪ್ರಸ್ತುತತೆಗೆ ಅರ್ಥ ಕೊಡುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತೊಳಲಾಡುವ ಅನುಭವ ಎಲ್ಲರಿಗೂ ಇದೆ.
ಬರಲಿರುವ ವೇದನೆಯನ್ನು ನೆನೆದು ರಕ್ತದ ಬೆವರನ್ನು ಸುರಿಸುತ್ತಾ ದೇವರಲ್ಲಿ ಯಾಚಿಸಿದ ಪ್ರಭುವಿನ ಮನಸ್ಥಿತಿ ಹೇಗಿದ್ದಿರಬಹುದು???!
ಅಂತರಾತ್ಮದ ಮಾತಿಗೆ ಕಿವಿಗೊಡುವವನಿಗೆ ಪ್ರಭುವು ಸೂಕ್ತವಾದ ತಿಳುವಳಿಕೆ ನೀಡಬಲ್ಲರು.
ಕರ್ತವ್ಯ - ಮಮತೆ ಯಾವುದನ್ನೂ ಕಳೆದುಕೊಳ್ಳಲು ಬಿಡರು.
ಅಜ್ಜಿ ಅದೇ ದಿನ ಇಹಲೋಕ ತ್ಯಜಿಸಿದರು. ಅವರು ಮೌನದಲ್ಲಿ ಇರುವಾಗಲೇ ನನ್ನ ದನಿಯು ಪ್ರಭುವನ್ನು ಹಾಡಿ ಮಹಿಮೆಪಡಿಸಿದ್ದು ಮುದ್ರಣಗೊಂಡು ದಾಖಲೆಯಾಗಿದೆ.
ಆದರೆ ಆ ಕಹಿಸಿಹಿ ಎರಡನ್ನೂ ಕಂಡಿದ್ದೇನೆ. ನೆನಪಿನಲ್ಲಿ ಉಳಿಸಿಕೊಂಡಿದ್ದೇನೆ.
ಅದರಿಂದ ಶ್ರೇಷ್ಟ ಪಾಠವನ್ನು ಕಲಿತ್ತಿದ್ದೇನೆ. ಹೇಗೆಂದರೆ ಪ್ರಥಮ-ಪರಿಪೂರ್ಣತೆ ನಡುವಿನ ಸಂಬಂಧದಲ್ಲಿ ಸಂಧಾನ ಮಾಡಿಕೊಂಡಿದ್ದೇನೆ. ಕೆಲವೊಮ್ಮೆ ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಕಿವಿಗೊಡಬಾರದು.‌
ಬೇರು ಧರೆಯಲ್ಲಿ, ಕೊಂಬೆಗಳು ಹೊರಪ್ರಪಂಚದಲ್ಲಿ ತನ್ನನ್ನು ತಾನೂ ಬೆಳೆಯಗೊಡುವಂತೆ ನಾವು ಬೆಳೆಯಬೇಕು.

- ರಾಬರ್ಟ್ ಕವನ್ರಾಗ್, ಮೈಸೂರು -


 

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...