ಗುರುವಾರ, ಜುಲೈ 30, 2020

universalzhone : Music






'ಸಮಯದ ಕೊರತೆ ಎಂದಿಗೂ ಇರದು'

ಸ್ವಾಭಾವಿಕ ಕಾಲದ ತಾಳದಲ್ಲಿನ ಗತಿಯ ಲಯದಲ್ಲಿ ಎಲ್ಲರೂ ಎಲ್ಲವೂ ಹೆಜ್ಜೆ ಹಾಕಲೇಬೇಕು.

ಪ್ರತಿಕ್ಷಣಗಳ ನಾಡಿಮಿಡಿತಗಳಲ್ಲಿ ಏರುಪೇರಾದರೂ ಅದರ ಗತಿಯು ನಿರ್ಣಾಯಕ ಎಂಬುದು ಹೃದಯಬಡಿತ ತನ್ನ ನಾದವನ್ನು ಮೌನವಾಗಿಸಿಕೊಂಡಾಗಲೇ ತಿಳಿವಾಗುವುದು.

ಅಷ್ಟರವರೆಗೇ ತನ್ನಿಂದಲೇ ಎಲ್ಲವು, ತನಗಾಗಿಯೇ ಎಲ್ಲವೂ ಎನ್ನುತ್ತಾ ತನ್ನ ಹಿಡಿತದಲ್ಲಿ ಎಲ್ಲವನೂ ಅವಿತ್ತಿಟ್ಟುಕೊಳ್ಳುವ ಪ್ರಯತ್ನದಲ್ಲಿ ಆ ನಿಮಿಷ ಸೋಲನ್ನು ಅನುಭವಿಸುತ್ತಾನೆ.
ಯಾರನ್ನು ತನ್ನ ಪ್ರಾಣ ಎಂದುಕೊಂಡು ಸದಾ ಅಪ್ಪಿಕೊಂಡಿದ್ದರೋ ಆ ಪ್ರಾಣ ಪಕ್ಷಿ ವಿರೂಪಗೊಳ್ಳಲು ತೊಡಗುವಾಗ ಪಂಚೇಂದ್ರಿಯಗಳು ಮೆಲ್ಲಮೆಲ್ಲನೆ ವಿರುದ್ಧಾತ್ಕಕವಾಗಿ ಕಾರ್ಯವೆಸಗಲು ಹವಣಿಸುತ್ತದೆ. ಅಲ್ಲಿಯವರೆಗೆ ಕಳೆದ ಸಮಯಗಳೆಲ್ಲವೂ ವ್ಯರ್ಥವೆಂದೆನಿಸಿ ಘಟಿಸಿದ್ದೆಲ್ಲವು ಗೊಬ್ಬರವಾಗುವ ಕ್ರಿಯೆಯಂತೆ ಅನುಭವದಿಂದ ಉಂಟಾದ ಅನುತಾಪವೆಲ್ಲವೂ ನೆನಪೆಂಬ ಬುಟ್ಟಿಯಲ್ಲಿ ಬೀಳುತ್ತವೆ.
ನಿದ್ದೆಗೆಟ್ಟು, ಬಣ್ಣಗೆಟ್ಟು, ಅಳತೆ ಮೀರಿ, ಎದೆಯುಬ್ಬಿಸಿ, ಕಣ್ಣರಳಿಸಿ, ಬಯಸಿಬಯಸಿ ಮಾಡಿದ್ದೆಲ್ಲವೂ, ಮಾಡಿಟ್ಟಿದ್ದೆಲ್ಲವೂ ಅಲ್ಲಿಗಲ್ಲೆ ತಲೆತಗ್ಗಿಸಿ ನಿಂತುಬಿಡುತ್ತವೆ.
ತುಂಬಿಸಿಟ್ಟ ಗಾಡಿಯನ್ನೆಳೆಯಲು ಸಾಕಿದ ಸಂಗಾತಿ, ಕುಡಿಗಳೇ ಓಗೊಡದೆ ಸರಿದುಬಿಡುತ್ತಾರೆ.
ಹೀಗಿರುವಾಗ ಸಮಯವನ್ನು ಒತ್ತಡದಿಂದ ಹೊದೆಯುವುದರಿಂದ ಪ್ರಯೋಜನವೇನು?
ತಮಗೂ ಸುಖನೆಮ್ಮದಿಯಿಲ್ಲದೆ, ತಮ್ಮೊಂದಿರುವವರಿಗೂ ನಗುಮುಖ ತೋರಿಸದೆ ಪರಿತಪಿಸಿ ಬದುಕುವ ನೀತಿಯೇಕೆ?
ವ್ಯರ್ಥ ಎಲ್ಲವೂ ವ್ಯರ್ಥವೆಂಬ ಅಂತಿಮ ಕೊರಗಿನಿಂದ ಕೊನೆಯಾಗುವುದೇಕೆ?
ದುಡಿಯುವುದರೊಂದಿಗೆ ದಣಿದ ಮನಕೆ ಮಧುರವಾಗಿರಬೇಕು.
ಪ್ರಾಮಾಣಿಕತೆಯೊಂದಿಗೆ ಪ್ರೀತಿಯ ಅಪ್ಪುಗೆಗೆ ಪರಿಪೂರ್ಣವಾಗಿರಬೇಕು.
ದೊರೆತ ಸಮಯದಲ್ಲಿ ದೊರೆಯಂತೆ ಅಲ್ಲದಿದ್ದರೂ ದೂರಿಲ್ಲದೆ, ದೂರದೆ ಉಸಿರನ್ನು ಉಸಿರಾಗಿಸಿಕೊಂಡು ಉಳಿಯಬೇಕು.
ದೇವರು-ಧರೆಯ ಒಡನಾಟದೊಂದಿಗೆ ನಿರಾಳತೆಯಿಂದ ಸಮಯವನ್ನು ಸಮಾನತೆಯಲ್ಲಿ ಸಂಯೋಜಿಸಿಕೊಳ್ಳಬೇಕು.
ಆಗ ಸಮಯ ಕಾಡಿಸುವುದಿಲ್ಲ.
ಕಾನನದಲ್ಲಿ ಕಾಣದ ಅನುಭವಗಳಲ್ಲಿ ನವಿರೇಳಿಸಿಕೊಂಡು, ಭಯವನ್ನೂ ರೋಮಾಂಚನವಾಗಿ ಪರಿವರ್ತಿಸಿಕೊಂಡು ಗುರಿಯೆಡೆಗೆ ಗುರುತ್ತಿಲ್ಲದಂತೆ ನೆಮ್ಮದಿಯಿಂದ ಹೆಜ್ಜೆ ಇಡಬಹುದು.
ಆ ನೆಮ್ಮದಿಯೊಂದಿಗೆ ಹೊರಟ ಬಾಳ ನೌಕೆಯು ಎಂತಹ ಬಿರುಗಾಳಿಯನ್ನು ಎದುರಿಸುವ ಧ್ಯೆರ್ಯದೆಡೆ ಧಾವಿಸ ತೊಡಗುತ್ತದೆ.
ಆಗ ಮನಸ್ಸೆಂಬ ಮಿಂಚಿನ ನೋಟದಲ್ಲಿ ಕೇವಲ ದಡ ಸೇರುವ ಸಂತೃಪ್ತಿಯ ಭಾವಕ್ಕೆ ಮಾತ್ರ ಸ್ಥಳವಿರುತ್ತದೆ. ಸಮಯವು ಸಾಧಾನೆಗೆ ಮೀಸಲಾಗಿರುವಾಗ ಸಮಯದ ಅಭಾವವು ಗೋಚರಿಸುವುದಿಲ್ಲ.
ಏಕೆಂದರೆ ಪ್ರತಿಯೊಂದು ಕ್ಷಣಗಳೂ ಸಹ ತನ್ನನ್ನು ಕಳೆದುಕೊಳ್ಳುವುದಿಲ್ಲ.
ಯಾವಾಗ ಮುನ್ನೋಟದಲ್ಲಿ ಆತಂಕ ಅನುಮಾನಗಳು ಕಾಣಿಸಿ ಮನಸ್ಸು ಚಂಚಲವಾಗುತ್ತದೋ ಆಗ ಸಮಯಗಳು ಭಾರವಾಗುತ್ತವೆ.
ಯಾವಾಗ ಹೃದಯದಲ್ಲಿ ನಿರಾಶೆಯ ಅಪನಂಬಿಕೆಯ ಮಾಧರಿಗಳು ರೂಪುಗೊಳ್ಳುತ್ತವೋ ಸಂಬಂಧಗಳೆಲ್ಲವೂ ದೂರ ಸರಿದಂತಾಗಿ ನಿಖರತೆಯಿಲ್ಲದೆ ನಿರ್ನಾಮದ ಚಿಂತೆಗಳು ಆವರಿಸಿಕೊಳ್ಳುತ್ತವೆ.
ಆಗ ಮುಂದಡಿಯಿಡಲಾರದ ಹೆಜ್ಜೆಗಳು ಅಲ್ಲೇ ಕುಸಿದು ಬಿಡುವ ಆಲೋಚನೆಗಳಿಗೆ ನಾಂದಿಯಾಡುತ್ತವೆ. ಕಾಲವು ಭೀಕರವಾಗಿ ಕಣ್ಣುಗಳು ಕತ್ತಲೆಯತ್ತ ಧಾವಿಸುತ್ತಲು ತವಕಿಸುತ್ತವೆ. ಕ್ಷಣಗಳು ಗಂಟೆಗಳಾಗಿ, ಗಂಟೆಗಳು ವಾರಗಳಾಗಿ, ವಾರಗಳು ವರ್ಷಗಳಂತೆ ಮೇಲೆರುವಂತೆ ಭಾಸವಾದಾಗ ಬದುಕು ಅರ್ಥವನ್ನು ಕಳೆದುಕೊಳ್ಳತೊಡಗುತ್ತವೆ. ಅದ್ದರಿಂದ ನೋಟ, ಮನಸ್ಸು, ಹೃದಯ, ಹೆಜ್ಜೆಗಳಲ್ಲಿ ದೃಢತೆ, ನಂಬಿಕೆ, ವಿಶ್ವಾಸ ಬೆರೆತಾಗ ಸಮಯವು ಸಾಲದಾಗುತ್ತವೆ.
ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡಾಗ ಸಮಯದ ಕೊರತೆಯೂ ಕಾಣದಾಗುತ್ತವೆ.
ಸಮಯವೂ ಸಹ ನಮ್ಮ ಜೊತೆ ಸಾಗುತ್ತದೆ.


ಶನಿವಾರ, ಜುಲೈ 4, 2020

*ಏಕಾಂತವೆಂಬ ಕಾಂತಿ ಹೀನತೆ*



ಪ್ರಾಣಿಪಕ್ಷಿ, ಕ್ರಿಮಿಕೀಟ, ಜಲಚರ, ಭೂಚರ ... ಸಮಸ್ತ ಜೀವಿಗಳು ಕೆಲವು ದೈಹಿಕ ಸ್ಥಿತಿಗತಿಯಲ್ಲಿ ಕೆಲ ಸಮಯ ಏಕಾಂತ ಅಗತ್ಯವಿದ್ದರೂ, ಒಂಟಿತನ ಇರುವುದಿಲ್ಲ.
ಪ್ರಾಕೃತಿಕ ಸಮಸ್ಥಿತಿಯನ್ನು ಕಾಪಾಡಿಕೊಳ್ಳಲು ಪ್ರತಿಯೊಂದು ಜೀವಿಗಳಲ್ಲಿಯೂ ಕ್ರಮಬದ್ದವಾದ ನಡುವಳಿಕೆ ಇರುತ್ತದೆ. ಕೂಡುವುದು, ಕಳೆಯುವುದು, ಬೆಳೆಯುವುದು, ಬೆಳೆಸುವುದು, ಕಟ್ಟುವುದು, ಹುಡುಕುವುದು, ಕೂಡಿಡುವುದು, ವಿರಮಿಸುವುದು... ಹೀಗೆ ತಮ್ಮನ್ನು ನಿಶ್ಚಿತ ತಹಬದಿಯಲ್ಲಿ ಯಾವುದೇ ಜಂಜಾಟವಿಲ್ಲದೆ ಕೊನೆಯವರೆಗೆ ಮುಂದುವರೆಸುತ್ತವೆ. 
ಉಳಿವಿಗಾಗಿ ಕೆಲವೊಮ್ಮೆ ಕಾದಾಡುತ್ತವೆ.
ಆದರೆ ಮಾನವ ಎಂಬ ಪ್ರಾಣಿ ನವ ಮಾಪಕದತ್ತ ದೃಷ್ಟಿನೆಟ್ಟು ಇತರ ನಡುವಳಿಕೆಗಳ ಕಡೆ ಗಮನ ನೀಡುವುದಕ್ಕಿಂತಲೂ ಹೆಚ್ಚಾಗಿ ತನ್ನುಳಿವಿಗಾಗಿ ಕೊನೆಯುಸಿರಿರುವರೆಗೂ ಕಾದಾಡುತ್ತಲೇ ಇರುತ್ತಾನೆ.
ನಾಗರಿಕತೆಯ ನೌಕೆಯಲ್ಲಿ ಪಯಣಿಸುವ ಮನುಜ, ಸೃಷ್ಟಿಯೊಳಗೇ ಇದ್ದು ಅದನ್ನು ಅವಲಂಬಿಸಿದ್ದರೂ ತಾನು ತನ್ನಿಂದಲೇ ತನ್ನುಳಿವು ಎಂಬಂತೆ ಕಾಲದೂಡುತ್ತಾನೆ.
ಆಚಾರವಿಚಾರ, ಜಾತಿಧರ್ಮ, ಕಾನೂನು ಕಟ್ಟಳೆಗಳ ಹೆಸರಿನಲ್ಲಿ ತನ್ನನ್ನು ತಾನೇ ಬಂಧಿಸಿಕೊಳ್ಳುತ್ತಾನೆ. ಕೊಸರಿಕೊಂಡು ಕೊರಗುತ್ತಾನೆ.
ಸಂಗಮ, ಸಂಯಮ, ಸಂಧಾನ, ಸಂಸಾರ, ಸಂಚಾರಗಳಲ್ಲಿ ಸರಿಗಟ್ಟಲಾರದೆ ಸಹನೆಗಳಲ್ಲಿ ಸೋಲುತ್ತಾನೆ. 
ತನ್ನಿಚ್ಛೆಗಳನ್ನು ಪೂರೈಸಿಕೊಳ್ಳಲಾಗದೆ, ಸರಿಸಿಡಲೂ ಆಗದೆ ತಳಮಳದಿಂದ ಮನಸಾಕ್ಷಿಗೆ ವಿರೋಧವಾಗಿ ನಡೆಯುತ್ತಾನೆ.
ಯಾವ ವಿಚಾರಗಳು‌ ತನ್ನ ಹದ್ದುಬಸ್ತಿಗಾಗಿ‌ ರೂಪಿಸಿಕೊಂಡನೋ ಅದೇ ಆತನ ಒಂಟಿತನಕ್ಕೆ ಕಾರಣವಾಗುವಾಗ ಮುದುಡುತ್ತಾನೆ. 
ದೇಹದ ಬಯಕೆ, ಮನಸ್ಸಿನ ಬಯಕೆಗಳನ್ನು ಸರಿದೂಗಿಸಲಾಗದೆ ನೀತಿನಿಯಮಗಳಿಗೆ ವಿರುದ್ಧ ದಿಕ್ಕನ್ನು ತೋರಿಸುತ್ತಾನೆ. ಸ್ವಾಭಿಮಾನ, ಅಹಂ, ಅನಾಸಕ್ತಿ, ಪಂಚೇಂದ್ರಿಯಗಳ ಬಯಕೆ, ಅತಿಯಾಸೆಗಳಿಂದ ಅನೇಕರು ಸಮಾಜದಲ್ಲಿ ಎದ್ದು ಕಾಣುತ್ತಾರೆ.
ತನಗೆ ಬೆಂಬಲವಿಲ್ಲ, ಯಾರೂ ಪ್ರೀತಿಸುತ್ತಿಲ್ಲ, ಜೊತೆಗಾರರಿಲ್ಲ, ತನ್ನಾಸೆಗೆ ಸಹಕರಿಸುವವರಿಲ್ಲ, ಪ್ರತಿಭೆಗಳಿಗೆ ಉತ್ತೇಜನ ಸಿಗುತ್ತಿಲ್ಲವೆಂಬಿತ್ಯಾದಿಗಳಿಂದ ಕೊರಗುತ್ತಾರೆ. 
ತಾನು ನಿರ್ಲಕ್ಷಕ್ಕೆ ಒಳಗಾಗಿದ್ದೇನೆ ಎಂಬ ಚಿಂತೆಯಲ್ಲಿ ಸೊರಗುತ್ತಾರೆ.
ಮಹಿಳೆಯರಲ್ಲಿ‌ ಏಕಾಂಗಿ ಭಾವನೆ ಕಾಡಿಸುವುದೇ ಹೆಚ್ಚು. 
ಗಂಡ ತನ್ನನ್ನು ನಿರಾಕರಿಸುತ್ತಿದ್ದಾನೆ ಎಂಬ ಚಿಂತೆ ಅನೇಕರಿಗಿದೆ. 
ವಿಧವೆಯಾದರಂತೂ ಸಮಾಜ ಅವರನ್ನೂ ಬೇರೆ ವಿಧದಲ್ಲಿಯೇ ನೋಡುತ್ತದೆ. 
ಹೆತ್ತವರಿಲ್ಲದೆ ಮಕ್ಕಳು, ಮುದಿ ವಯಸ್ಸಿನಲ್ಲಿ ಹೆತ್ತವರು ಒಂಟಿತನದಿಂದ ದುಃಖಿಸುತ್ತಾರೆ. 
ಒಂಟಿತನ ಒಂದಿಲ್ಲೊಂದು ಬಾರಿ ಎಲ್ಲರನ್ನೂ ಕಾಡಿರುತ್ತದೆ. 
ಕೆಲವರು ಅದಕ್ಕೆ ಸೋತೆಬಿಟ್ಟಿರುತ್ತಾರೆ.
ಏಕಾಂತ ಕಾಡಿಸದಿರಲು,
* ಒಂಟಿತನವನ್ನು ತೊರೆಯುವ ಅನೇಕ ಮಾರ್ಗಗಳಿವೆ. ಅವುಗಳನ್ನು ಪಾಲಿಸಬೇಕು
* ಸದಾ ಕಾರ್ಯಪ್ರವೃತ್ತರಾಗಲು ಪ್ರಯತ್ನಿಸಬೇಕು.
* ಕಾಡಿಸುವ ಒಂಟಿತನದ ವಿಚಾರಗಳನ್ನು ನೆನಪಿಸಿಕೊಳ್ಳಬಾರದು.
* ಸ್ನೇಹ, ಉತ್ತಮ ಸಂಬಂಧಗಳನ್ನು ರೂಪಿಸಿಕೊಳ್ಳಬೇಕು.
* ಧ್ಯಾನ, ಆತ್ಮಸ್ಥೈರ್ಯಗಳನ್ನು ರೂಢಿಸಿಕೊಳ್ಳಬೇಕು.
* ಸಾವಧಾನವಾಗಿ ಚಿಂತಿಸಿ ಸೂಕ್ತ ಪರಿಹಾರವನ್ನು ಯಾವುದೇ ಸಂಕೋಚವಿಲ್ಲದೆ ಕಂಡುಕೊಳ್ಳಬೇಕು.
* ಒಂಟಿ ಎನ್ನುವ ಕನಿಕರ, ಕರುಣಾ ನೋಟಕ್ಕಾಗಿ ತವಕಿಸದೆ ಮನದಾಳದಲ್ಲಿ ನಾನು ಒಂಟಿಯಲ್ಲ ಎಂಬ ದೃಢತೆಗೆ ಪ್ರಯತ್ನಿಸಬೇಕು.
* ಒಂಟಿತನವನ್ನು ಒಂಟಿತನದಿಂದಲೇ ಗೆಲ್ಲಬೇಕು.!!!







*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...