ಶನಿವಾರ, ಜುಲೈ 4, 2020

*ಏಕಾಂತವೆಂಬ ಕಾಂತಿ ಹೀನತೆ*



ಪ್ರಾಣಿಪಕ್ಷಿ, ಕ್ರಿಮಿಕೀಟ, ಜಲಚರ, ಭೂಚರ ... ಸಮಸ್ತ ಜೀವಿಗಳು ಕೆಲವು ದೈಹಿಕ ಸ್ಥಿತಿಗತಿಯಲ್ಲಿ ಕೆಲ ಸಮಯ ಏಕಾಂತ ಅಗತ್ಯವಿದ್ದರೂ, ಒಂಟಿತನ ಇರುವುದಿಲ್ಲ.
ಪ್ರಾಕೃತಿಕ ಸಮಸ್ಥಿತಿಯನ್ನು ಕಾಪಾಡಿಕೊಳ್ಳಲು ಪ್ರತಿಯೊಂದು ಜೀವಿಗಳಲ್ಲಿಯೂ ಕ್ರಮಬದ್ದವಾದ ನಡುವಳಿಕೆ ಇರುತ್ತದೆ. ಕೂಡುವುದು, ಕಳೆಯುವುದು, ಬೆಳೆಯುವುದು, ಬೆಳೆಸುವುದು, ಕಟ್ಟುವುದು, ಹುಡುಕುವುದು, ಕೂಡಿಡುವುದು, ವಿರಮಿಸುವುದು... ಹೀಗೆ ತಮ್ಮನ್ನು ನಿಶ್ಚಿತ ತಹಬದಿಯಲ್ಲಿ ಯಾವುದೇ ಜಂಜಾಟವಿಲ್ಲದೆ ಕೊನೆಯವರೆಗೆ ಮುಂದುವರೆಸುತ್ತವೆ. 
ಉಳಿವಿಗಾಗಿ ಕೆಲವೊಮ್ಮೆ ಕಾದಾಡುತ್ತವೆ.
ಆದರೆ ಮಾನವ ಎಂಬ ಪ್ರಾಣಿ ನವ ಮಾಪಕದತ್ತ ದೃಷ್ಟಿನೆಟ್ಟು ಇತರ ನಡುವಳಿಕೆಗಳ ಕಡೆ ಗಮನ ನೀಡುವುದಕ್ಕಿಂತಲೂ ಹೆಚ್ಚಾಗಿ ತನ್ನುಳಿವಿಗಾಗಿ ಕೊನೆಯುಸಿರಿರುವರೆಗೂ ಕಾದಾಡುತ್ತಲೇ ಇರುತ್ತಾನೆ.
ನಾಗರಿಕತೆಯ ನೌಕೆಯಲ್ಲಿ ಪಯಣಿಸುವ ಮನುಜ, ಸೃಷ್ಟಿಯೊಳಗೇ ಇದ್ದು ಅದನ್ನು ಅವಲಂಬಿಸಿದ್ದರೂ ತಾನು ತನ್ನಿಂದಲೇ ತನ್ನುಳಿವು ಎಂಬಂತೆ ಕಾಲದೂಡುತ್ತಾನೆ.
ಆಚಾರವಿಚಾರ, ಜಾತಿಧರ್ಮ, ಕಾನೂನು ಕಟ್ಟಳೆಗಳ ಹೆಸರಿನಲ್ಲಿ ತನ್ನನ್ನು ತಾನೇ ಬಂಧಿಸಿಕೊಳ್ಳುತ್ತಾನೆ. ಕೊಸರಿಕೊಂಡು ಕೊರಗುತ್ತಾನೆ.
ಸಂಗಮ, ಸಂಯಮ, ಸಂಧಾನ, ಸಂಸಾರ, ಸಂಚಾರಗಳಲ್ಲಿ ಸರಿಗಟ್ಟಲಾರದೆ ಸಹನೆಗಳಲ್ಲಿ ಸೋಲುತ್ತಾನೆ. 
ತನ್ನಿಚ್ಛೆಗಳನ್ನು ಪೂರೈಸಿಕೊಳ್ಳಲಾಗದೆ, ಸರಿಸಿಡಲೂ ಆಗದೆ ತಳಮಳದಿಂದ ಮನಸಾಕ್ಷಿಗೆ ವಿರೋಧವಾಗಿ ನಡೆಯುತ್ತಾನೆ.
ಯಾವ ವಿಚಾರಗಳು‌ ತನ್ನ ಹದ್ದುಬಸ್ತಿಗಾಗಿ‌ ರೂಪಿಸಿಕೊಂಡನೋ ಅದೇ ಆತನ ಒಂಟಿತನಕ್ಕೆ ಕಾರಣವಾಗುವಾಗ ಮುದುಡುತ್ತಾನೆ. 
ದೇಹದ ಬಯಕೆ, ಮನಸ್ಸಿನ ಬಯಕೆಗಳನ್ನು ಸರಿದೂಗಿಸಲಾಗದೆ ನೀತಿನಿಯಮಗಳಿಗೆ ವಿರುದ್ಧ ದಿಕ್ಕನ್ನು ತೋರಿಸುತ್ತಾನೆ. ಸ್ವಾಭಿಮಾನ, ಅಹಂ, ಅನಾಸಕ್ತಿ, ಪಂಚೇಂದ್ರಿಯಗಳ ಬಯಕೆ, ಅತಿಯಾಸೆಗಳಿಂದ ಅನೇಕರು ಸಮಾಜದಲ್ಲಿ ಎದ್ದು ಕಾಣುತ್ತಾರೆ.
ತನಗೆ ಬೆಂಬಲವಿಲ್ಲ, ಯಾರೂ ಪ್ರೀತಿಸುತ್ತಿಲ್ಲ, ಜೊತೆಗಾರರಿಲ್ಲ, ತನ್ನಾಸೆಗೆ ಸಹಕರಿಸುವವರಿಲ್ಲ, ಪ್ರತಿಭೆಗಳಿಗೆ ಉತ್ತೇಜನ ಸಿಗುತ್ತಿಲ್ಲವೆಂಬಿತ್ಯಾದಿಗಳಿಂದ ಕೊರಗುತ್ತಾರೆ. 
ತಾನು ನಿರ್ಲಕ್ಷಕ್ಕೆ ಒಳಗಾಗಿದ್ದೇನೆ ಎಂಬ ಚಿಂತೆಯಲ್ಲಿ ಸೊರಗುತ್ತಾರೆ.
ಮಹಿಳೆಯರಲ್ಲಿ‌ ಏಕಾಂಗಿ ಭಾವನೆ ಕಾಡಿಸುವುದೇ ಹೆಚ್ಚು. 
ಗಂಡ ತನ್ನನ್ನು ನಿರಾಕರಿಸುತ್ತಿದ್ದಾನೆ ಎಂಬ ಚಿಂತೆ ಅನೇಕರಿಗಿದೆ. 
ವಿಧವೆಯಾದರಂತೂ ಸಮಾಜ ಅವರನ್ನೂ ಬೇರೆ ವಿಧದಲ್ಲಿಯೇ ನೋಡುತ್ತದೆ. 
ಹೆತ್ತವರಿಲ್ಲದೆ ಮಕ್ಕಳು, ಮುದಿ ವಯಸ್ಸಿನಲ್ಲಿ ಹೆತ್ತವರು ಒಂಟಿತನದಿಂದ ದುಃಖಿಸುತ್ತಾರೆ. 
ಒಂಟಿತನ ಒಂದಿಲ್ಲೊಂದು ಬಾರಿ ಎಲ್ಲರನ್ನೂ ಕಾಡಿರುತ್ತದೆ. 
ಕೆಲವರು ಅದಕ್ಕೆ ಸೋತೆಬಿಟ್ಟಿರುತ್ತಾರೆ.
ಏಕಾಂತ ಕಾಡಿಸದಿರಲು,
* ಒಂಟಿತನವನ್ನು ತೊರೆಯುವ ಅನೇಕ ಮಾರ್ಗಗಳಿವೆ. ಅವುಗಳನ್ನು ಪಾಲಿಸಬೇಕು
* ಸದಾ ಕಾರ್ಯಪ್ರವೃತ್ತರಾಗಲು ಪ್ರಯತ್ನಿಸಬೇಕು.
* ಕಾಡಿಸುವ ಒಂಟಿತನದ ವಿಚಾರಗಳನ್ನು ನೆನಪಿಸಿಕೊಳ್ಳಬಾರದು.
* ಸ್ನೇಹ, ಉತ್ತಮ ಸಂಬಂಧಗಳನ್ನು ರೂಪಿಸಿಕೊಳ್ಳಬೇಕು.
* ಧ್ಯಾನ, ಆತ್ಮಸ್ಥೈರ್ಯಗಳನ್ನು ರೂಢಿಸಿಕೊಳ್ಳಬೇಕು.
* ಸಾವಧಾನವಾಗಿ ಚಿಂತಿಸಿ ಸೂಕ್ತ ಪರಿಹಾರವನ್ನು ಯಾವುದೇ ಸಂಕೋಚವಿಲ್ಲದೆ ಕಂಡುಕೊಳ್ಳಬೇಕು.
* ಒಂಟಿ ಎನ್ನುವ ಕನಿಕರ, ಕರುಣಾ ನೋಟಕ್ಕಾಗಿ ತವಕಿಸದೆ ಮನದಾಳದಲ್ಲಿ ನಾನು ಒಂಟಿಯಲ್ಲ ಎಂಬ ದೃಢತೆಗೆ ಪ್ರಯತ್ನಿಸಬೇಕು.
* ಒಂಟಿತನವನ್ನು ಒಂಟಿತನದಿಂದಲೇ ಗೆಲ್ಲಬೇಕು.!!!







ಕಾಮೆಂಟ್‌ಗಳಿಲ್ಲ:

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...