'ನಾಳೆ ಎನುವುದು ಇರುವುದೇ?!'
ಕೇರಳ, ಮಡಿಕೇರಿಗಳಿಗಿಂತಲೂ ಹೆಚ್ಚಿನ ಅನಾಹುತಗಳನ್ನು ಸೃಷ್ಟಿಸಿದ, ಸೃಷ್ಟಿಸುತ್ತಿರುವ ಅತಿವೃಷ್ಟಿ, ಜಲಪ್ರಳಯದ ಪರಿಣಾಮಗಳನ್ನು ನೋಡಿದ್ದೇವೆ.
ಒಂದು ಕಡೆ ಮುಗಿಯಿತು ಎನ್ನುವಾಗಲೇ ಮತ್ತೊಂದು ಕಡೆ ಅದರ ಧರೆಯ ಶುದ್ದಿಕರಣ ಕರ್ತವ್ಯ ಆರಂಭವಾಗಿರುತ್ತದೆ.
ಎಷ್ಟರಮಟ್ಟಿಗೆ ಧರೆಯು ತನ್ನನ್ನು ತಾನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೋ ಅದಕ್ಕಿಂತಲೂ ಅಧಿಕವಾಗಿ ಮಾನವ ತನ್ನಳಿವನ್ನು ತಾನೇ ದೃಢಪಡಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದ್ದಾನೆ.
ಇಂದಿನ ಸೂಕ್ಷ್ಮವಾದ ತೀವ್ರತರವಾದ ಬದಲಾವಣೆಯ ಯುಗದಲ್ಲಿ ಈ ಕ್ಷಣವೇ ಕೊನೆಯಾಗಿರಬಹುದೆಂದು ಆತನಿಗೆ ಗೊತ್ತಿದೆ.
ಇದನ್ನೂ ಕಡೆಗಣಿಸಿ ಬಿಗಿ ಬಂಧನದ ತಿಳಿಯಾದ ಮುಖ ಚಹರೆಯಲ್ಲಿ ಈ ಕ್ಷಣವಿದ್ದು ಮುಂದಿನ ಯುಗಗಳ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ.
ತನ್ನನ್ನು ತಾನು ಹೆಚ್ಚಿಸಿಕೊಂಡು ತನ್ನಿಂದಲೇ ಎಲ್ಲವೂ ಎಂಬಂತೆ ತೋರ್ಪಡಿಸುವ ಕಾರ್ಯಗಳಲ್ಲು ನಿರತನಾಗಿದ್ದಾನೆ.
ಅದರೆ ಆತನಿಗೆ ಗೊತ್ತು ತನ್ನಿಂದೆಲ್ಲವನ್ನೂ ಮಾಡಲು ಅಸಾಧ್ಯವೆಂದು!
ಆತ್ಮೀಕತೆ, ಸಾಮಾಜಿಕ, ದೈಹಿಕ, ಮಾನಸಿಕ ಸ್ವಸ್ಥತೆಗಳ ಎಲ್ಲಾ ಒಂದಿಲ್ಲೊಂದು ವಿಷಯಗಳಲ್ಲಿ ಪರಿಣತಿಯನ್ನು ಪಡೆದಿದ್ದರೂ ಅದರ ಪಾಲನೆಯಲ್ಲಿ ಅಪೂರ್ಣನಾಗಿ ಸೋಲನ್ನೊಪ್ಪಿಕೊಳ್ಳದೆಯೇ ಗೆಲುವನ್ನು ಸಾಧಿಸಿದ್ದೇನೆಂದು ಬೀಗುತ್ತಿದ್ದಾನೆ.
ವೈಜ್ಞಾನಿಕತೆಯ ಅಪರಿಮಿತ ವೇಗವು ಆತನನ್ನು ಅರಿವಿಲ್ಲದಂತೆ ಇಂಧನರಹಿತ ವಾಹನದಂತೆ ನಿಂತಲ್ಲೇ ನಿಲ್ಲಿಸಿಬಿಟ್ಟಿದೆ.
ದೇಹದಲ್ಲಿ ಹೋಗಲಾಡಿಸದ ಬಾಧೆಗಳನ್ನೂ ಸಹಿಸಿ ಭಾರವಾದ ಹೆಜ್ಜೆಗಳನ್ನು ಪ್ರತಿ ಕ್ಷಣಗಳಲ್ಲೂ ಇಡುತ್ತಿದ್ದಾನೆ.
ಉದ್ದೇಶವನ್ನೇ ಸ್ಪಷ್ಟವಾಗಿ ಮನನ ಮಾಡಿಕೊಳ್ಳದೆ. ಮಾಡಿಕೊಂಡ ಅಸ್ಪಷ್ಟ ನಿರ್ಧಾರಗಳತ್ತ ನಿರ್ಲಿಪ್ತನಾಗಿ ಸರಿಯುತ್ತಿದ್ದಾನೆ.
ಕಾಲ ಅವನ ಹಿಡಿತದಲ್ಲಿಲ್ಲದಿದ್ದರೂ ಕಾಲವನ್ನು ಕಾಣುತ್ತಾನೆ. ಅಂತರಾಳ ಅಂಕೆಯಿಲ್ಲದೆ ಅಲೆಯುತ್ತಿದ್ದರೂ ಅಲುಗದ ಅಚಲನೆಂದುಕೊಂಡಿದ್ದಾನೆ. ಮುಂದಿನ ಕ್ಷಣ ತನ್ನದ್ದಲ್ಲವೆಂದುಕೊಂಡಿದ್ದರೂ ತನ್ನ ಮುಂದಿನದೆಲ್ಲವೂ ತನ್ನದೇ ಎಂದು ಮೆರೆಯುತ್ತಿದ್ದಾನೆ.
ಅಜ್ಞಾನದ ಮಾತುಗಳು, ಅರ್ಥವಿಲ್ಲದ ಆಲೋಚನೆಗಳು, ಆರೋಗ್ಯವಿಲ್ಲದ ಚೇತನಗಳಾಗಿ ಮಾರ್ಪಟ್ಟಿವೆ. ತನ್ನನ್ನು ತಾನೇ ಹೆಚ್ಚಿಸಿಕೊಂಡರು, ತನ್ನಲ್ಲೇ ತಾನು ನಂಬಿಕೆ ಕಳೆದುಕೊಂಡು ಬಾವಲಿಗಳಂತೆ ಹೊಸತನ ತೋರಿಸುತ್ತಿದ್ದಾನೆ.
ನಾಳೆ ಎನುವುದು ಇದ್ದರೂ ಅದರಲ್ಲಿ ನಾವಿರುತ್ತೇವೆಯೋ ಎಂಬ ಚಿಂತನೆಗಳಿಗೆ ದಾರಿ ಮಾಡುವುದು ಒಳಿತು. ಯಾರದೋ ಚೈತನ್ಯ ನುಡಿಗಳು ನಮ್ಮಲ್ಲಿ ನುಡಿಗಳಾಗಿ ನೆನಪೊಳಗಿದ್ದರೆ ಸಾಲದು. ಅದು ಕ್ರಿಯೆಯ ಚಾಲನೆಯಲ್ಲಿರಬೇಕು.
- ರಾಬರ್ಟ್ ಕವನ್ರಾಗ್, ಮೈಸೂರು -
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ