ಬುಧವಾರ, ಸೆಪ್ಟೆಂಬರ್ 9, 2020

*ಸಮಚಿತ್ತದ ಸಮನ್ವಯ ಸ್ಥಿತಿ*



ಜಾತಿ, ಮತ, ಕುಲ, ಪಂಗಡಗಳೆಲ್ಲವನ್ನೂ ಬದಿಗಿಟ್ಟು ಒಮ್ಮೆ ಸಾವಧಾನವಾಗಿ ಯೋಚಿಸೋಣ.
ನಮ್ಮ ಈ ಗಳಿಗೆಯ ಸ್ಥಿತಿ ಹೇಗಿದೆ? ಯಾವ ಉದ್ದೇಶಕ್ಕಾಗಿ ನಾವು ಪ್ರಾರ್ಥನೆ, ಪೂಜೆಪುನಸ್ಕಾರ, ಆಚಾರವಿಚಾರ, ಸದ್ಗುಣ ಪಾಲನೆ, ನೀತಿನಿಯಮಗಳ ಅಂತರ್ ಪ್ರಯಾಣ, ತ್ಯಾಗಸೇವೆಗಳ ಸಂಸರ್ಗ, ಸದ್ಗತಿಯ ಚಿಂತನೆಗಳಂತಹ ಈ ಲೋಕಕ್ಕೆ ನಿಷ್ಠೂರವಾದ ಕಾರ್ಯಗಳನ್ನು ಕೆಲವರು ಕೈಗೊಳ್ಳುವುದೇಕೆ?
ಮೈಮನಗಳನ್ನು ದಂಡಿಸಿಕೊಂಡು ಬದುಕಿದರೆ ಅದರಿಂದಾಗುವ ಒಳಿತಾದರೂ ಏನು?!
ಸುಖ-ಸಂತೋಷ-ನೆಮ್ಮದಿಯನ್ನು ತೊರೆದು ಬಾಳುವುದರಿಂದ ಸಾಧಿಸುವುದಾದರೂ ಏನನ್ನು?
ಸತ್ತ ಮೇಲೆ ಏನಾಗುತ್ತೇವೆ ಎಂಬ ಸತ್ಯ ನಿಜವಾಗಲೂ ಯಾರಾದರೂ ಕಂಡಿದ್ದಾರೆಯೇ? ಹೇಳಿದ್ದಾರೆಯೇ?
ಸತ್ತವರು ನಮಗಾಗಿ ದೇವರಿಂದ ನಮ್ಮ ಅಗತ್ಯಗಳನ್ನು ಬೇಡಿ ಕೊಡುತ್ತಾರೆ ಎಂದು ತಿಥಿ, ಸ್ಮರಣೆಗಳನ್ನು ಮಾಡುವುದಾದರೆ ಯಾವ ರೀತಿ? ಸತ್ತವರಿಂದ ಎಲ್ಲವೂ ಸಾಧ್ಯ ಎಂದ ಮೇಲೆ ಮಹಾತ್ಮರ, ಪುಣ್ಯಪುರುಷರ, ನ್ಯಾಯನೀತಿಗಾಗಿ ಪ್ರಾಣತ್ಯಾಗ ಮಾಡಿದ.... ಆತ್ಮಗಳು ಏನು ಮಾಡುತ್ತಿವೆ. ಇಂತಹ ಚಿಂತನೆಗಳು ಕಾಡಿಸುವುದು ಸಹಜ.
ಆದರೂ ಅಂತಹ ಪ್ರಶ್ನೆಗಳನ್ನು ಅವಿತ್ತಿಟ್ಟು ದೇವರು, ಧರ್ಮ, ಧರ್ಮಗಳ ಕಟ್ಟುನಿಟ್ಟಿನ ಪಾಲನೆ, ಮುಕ್ತಿಯ ಅಭಿಲಾಷೆ, ಭಯಭಕ್ತಿಗಳ ನಿಮಿತ್ತ ಉತ್ತರ ಕಂಡುಕೊಳ್ಳಲಾಗದೆ ಕೊನೆಯುಸಿರಿನವರೆಗೂ ಬದುಕು ಸಾಗಿಸುತ್ತೇವೆ. ಪವಿತ್ರಗ್ರಂಥ, ಬೋಧನೆಗಳ ಮೇಲಿನ ಅಚಲ ವಿಶ್ವಾಸದಿಂದ ಅಗೋಚರ ದೈವತ್ವದ ಸ್ಪರ್ಶದಲ್ಲಿ ಒಂದಾಗಲು ಬಯಸುತ್ತೇವೆ.
ಏಕಾಂತದಲ್ಲಿ ಕುಳಿತು ಪ್ರಸ್ತುತವನ್ನು ಮಾತ್ರ ಚಿಂತಿಸಿದರೆ ಕೆಲವೊಮ್ಮೆ ಎಲ್ಲವೂ ನಾಟಕೀಯವಾಗಿ ಭಾಸವಾಗುತ್ತವೆ. ಏಕೆಂದರೆ ಬದುಕು ದಾರಿ ನಮ್ಮ ಇಷ್ಟಕ್ಕೆ ತದ್ವಿರೋಧವಾಗಿರುತ್ತದೆ.
ನೈಜ ಪ್ರೀತಿಯನ್ನು ತೋರಿಸಿರುವುದಿಲ್ಲ. ಕ್ಷಮಿಸುವ ಮನಸ್ಥಿತಿ ಇರೋದಿಲ್ಲ. ಸಿರಿತನ, ಕೀರ್ತಿ, ಪ್ರತಿಷ್ಟೆಗಳ ಬಾಲ ಹಿಡಿದಿರುತ್ತೇವೆ.
ಅಂತರಂಗದ ಮಾತಿಗೆ ಕಿವಿಗೊಟ್ಟಿರುವುದಿಲ್ಲ.
ನಮ್ಮನ್ನು ನಾವು ಹೆಚ್ಚಿಸಿಕೊಳ್ಳುವುದರಲ್ಲೇ ಬಾಳ ಹಾದಿಯನ್ನು ಸವೆಸಿರುತ್ತೇವೆ.
ಧರ್ಮ ಬೋಧಿಸುವುದು ಲೋಕದಲ್ಲಿ ಎಲ್ಲರೂ ದೇವರ ಮಕ್ಕಳು.
ಸಮಾನತೆ-ಸಮಾಧಾನ-ಸಂತೋಷ. ಇಷ್ಟನ್ನು ಬಿಟ್ಟು ಬೇರೆ ಏನೇ ಪುಣ್ಯಕಾರ್ಯಗಳನ್ನು ಮಾಡಿದರು, ಗ್ರಂಥಗಳನ್ನು ಓದಿ, ಬೋಧಿಸಿದರೂ ಅವೆಲ್ಲವೂ ಬಹುಶಃ ನಿಷ್ಪ್ರಯೋಜಕವೆಂಬುದು ಎಲ್ಲರಿಗೂ ಅರಿವಿದೆ.
ಈ ಅರಿವಿನ ಅಳತೆಯಲ್ಲಿ ಅಗೋಚರ ಅಂತರಾತ್ಮನ ಅನುಗ್ರಹದಲ್ಲಿ ಅನುರಾಗದ ಸೆಲೆಯಾಗಿರಲು ಪ್ರಯತ್ನಿಸೋಣ.
ಆಂತರ್ಯದಿಂದ ಎಲ್ಲರೊಂದಿಗೆ ಸಮಾನತೆಯಲ್ಲಿ ಬಾಳಿ ನಿಜ ಮನುಷ್ಯರಾಗೋಣ.
'ನಿನ್ನಂತೆಯೆ ನೆರೆಹೊರೆಯವರನ್ನು ಪ್ರೀತಿಸು" ಎಂದು ಪ್ರಭು ಹೇಳಿದ್ದು ಇದಕ್ಕೆ ಇರಬಹುದು!

- ರಾಬರ್ಟ್ ಕವನ್ರಾಗ್, ಮೈಸೂರು-

ಕಾಮೆಂಟ್‌ಗಳಿಲ್ಲ:

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...