ಆಂತರ್ಯ + ಮನಸ್ಸುಗಳು ಮೌನ ತಾಳಿದಾಗ!
ಬೆಳಕು ಎಲ್ಲಕ್ಕಿಂತಲೂ ವೇಗವಾಗಿ ಚಲಿಸುತ್ತದೆ. ಆದ್ದರಿಂದಲೇ ಮಿಂಚಿನ ನಂತರದಲಿ ಗುಡುಗು ಕೇಳಿಸುವುದು. ಬೆಳಕಿಗಿಂತಲೂ ವೇಗದಲ್ಲಿ ತಲುಪುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಅದು ಪ್ರಪಂಚದ ಯಾವ ಮೂಲೆಗಾದರೂ ಏನೂ ಬ್ರಹ್ಮಾಂಡವನ್ನೇ ಸುತ್ತಿಬರುತ್ತದೆ. ಅದು ಯಾರ, ಯಾವುದೇ ಹಿಡಿತಕ್ಕೂ ಸಿಗದಂತಹ ಮಹಾ ಪ್ರಚಂಡ. ವೈಶಿಷ್ಟ್ಯವೆಂದರೆ ಅದು ಯಾರಲ್ಲಿದೆಯೊ ಆ ವ್ಯಕ್ತಿಯ ಅಪ್ಪುಗೆಯಲ್ಲಿ ಮಾತ್ರ ತನ್ನನ್ನು ತಗ್ಗಿಸಿಕೊಳ್ಳಬಲ್ಲದು. ಅದು ಅ ವ್ಯಕ್ತಿಯ ವ್ಯಕ್ತಿತ್ವದ ಭಾವಂತರಂಗ ಸ್ಪರ್ಶದ ಪರಿಮಿತಿಯಲ್ಲಿ ಮಾತ್ರವೇ ಸಾಧ್ಯ. ಆ ಮನಸ್ಸು ಅಥವಾ ಚಿತ್ತವೇ ಅಂತರಾಳದ ಸ್ನೇಹಿತ. ಈ ಗೆಳೆಯರಿಬ್ಬರೂ ಪ್ರತಿ ಹೃದಯದ ತುಡಿತಗಳನ್ನೂ ಬಲ್ಲವರಾಗಿದ್ದು ಸದಾ ಮಾತನಾಡಿಕೊಂಡು ಅದರ ಸುಸ್ಥಿಗೆ ಯೋಜನೆಗಳನ್ನು ರೂಪಿಸುತ್ತಾರೆ.
ಒಬ್ಬ ವ್ಯಕ್ತಿಯ ಜ್ಞಾನ, ನಡತೆ, ಗುಣ, ರೂಪ, ಸ್ಥಿತಿಗತಿ, ಸಾಧನೆಗಳೆಲ್ಲವೂ ಇವುಗಳಲ್ಲಿ ಕೇಂದ್ರಿಕೃತವಾಗಿದೆ. ಅವುಗಳು ತಮ್ಮ ಮಾತನ್ನು ಅರೆಕ್ಷಣ ತಡೆಹಿಡಿದರೂ ಇಡೀ ವ್ಯಕ್ತಿ ವ್ಯಕ್ತಿತ್ವ ವಿರೂಪಗೊಳ್ಳುತ್ತದೆ.
ಮುಂದಿನ ದೃಷ್ಟಿಕೋನ, ಮುಂದಿನ ಯೋಜನೆಗಳು, ಮುಂದಿನ ಬದುಕು ಇದ್ದಕ್ಕಿದ್ದ ಹಾಗೆ ತಿರುವನ್ನು ತೆಗೆದುಕೊಳ್ಳುತ್ತವೆ.
ಇದರಿಂದಲೆ ಸಾಧನೆಗಳತ್ತ ಪಯಣಿಸುವ ಭರವಸೆಯ ಬಲಗಳು, ಸಾಕ್ಷಾತ್ಕಾರದತ್ತ ಧಾವಿಸುವ ಸಾತ್ವಿಕ ನಿಲುವುಗಳು ತಮ್ಮತನವನ್ನು ಜಾರಿಸಿಬಿಟ್ಟು ಹೊಸ ಮಾರ್ಗದಲ್ಲಿ ಮುಂದುವರೆಯುತ್ತವೆ. ಇದರಿಂದ ಒಳಿತನ್ನು ಕಾಣಬಹುದು, ಅಳಿವನ್ನು ನಿರೀಕ್ಷಿಸಬಹುದು.
ಉತ್ತಮವಾದ ಹೊಸ ಪರಿಚಯವಿದ್ದರೆ ಯಾವ ತೊಂದರೆಗಳು ಇರದು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಭೀತಿಯನ್ನು ಉಂಟು ಮಾಡಬಲ್ಲ ತಾಪಕ್ಕೆ ದಾರಿಯಾದರೆ ಅನಾಹುತ ಸಂಭವಿಸುವುದು.
ತಿಳಿ ಹೇಳುವವರ ಒಂದು ದೃಢವಾದ ಮಾತು, ದಾರಿದೀಪದಂತಿರುವ ಒಂದೇ ಒಂದು ಕಿಡಿ ಅದು ಧಾರ್ಮಿಕವಾಗಿರಲಿ, ಸಾಮಾಜಿಕವಾಗಿರಲಿ ಮುಂಬರುವ ಅನುಭವಗಳನ್ನೇ ಆತಂಕಕಾರಿಯಾಗಿ ಪರಿಣಮಿಸಲು ಕಾರಣವಾಗುತ್ತವೆ.
ಆದ್ದರಿಂದ
- ವಿದ್ಯೆಗೆ ನದಿಯಾಗಿರುವ ಶಿಕ್ಷಕರು,
- ಜ್ಞಾನಕ್ಕೆ ಪೂರಣವಾಗಿರುವ ಮೇಧಾವಿಗಳು,
- ಧಾರ್ಮಿಕತೆಯ ಮೂಲಕ ಆತ್ಮ ಬೆಳವಣಿಗೆಗೆ ಆದರ್ಶ ಪ್ರಾಯರಾದವರು,
- ಸಾಧನೆಗಳ ಹಾದಿಯ ಸ್ಪೂರ್ತಿದಾಯಕರುಗಳ.......
* ಮನ-ಮನದಾಳದ ಮಾತಿನಲ್ಲಿ ನಿಖರವಾದ ಪದಗಳಿರಬೇಕು.
* ಸತ್ಯತೆಯ ಸಿಂಚನಗಳಾಗಿರಬೇಕು,
* ಸದ್ಗುಣಗಳನ್ನು ಶೃಂಗರಿಸಿಕೊಂಡ ರೂಪವಂತರಾಗಿರಬೇಕು.
* ಜ್ಞಾನದ ಕೊರತೆಗಳಿದ್ದರೂ ಸಾಮಾಜಿಕ ಧನಾತ್ಮಕ ಚಿಂತನೆಗಳ ಸುಗಂಧ ಸೂಸುವವರಾಗಿರಬೇಕು.
* ವಿದ್ಯಾವಂತರಲ್ಲದಿದ್ದರೂ ವಿಷಯಗಳ ಸಮರ್ಪಕ ಜಲಧಾರೆಯಾಗಿರಬೇಕು.
* ಸ್ವಾರ್ಥ, ಅಹಂಗಳಂತಹ ಅಲ್ಪತನಗಳ ಎದುರಾಳಿಯಾಗಿರಬೇಕು.
ಪ್ರಾಮಾಣಿಕತೆ, ಪರಿಶುದ್ದತೆ, ಪರಿಪೂರ್ಣತೆಗಳನ್ನು ಪಾಲಿಸಲು ಪ್ರಯತ್ನಿಸುತ್ತಾ ಪಾವನತೆಯನ್ನು ಪಡೆದುಕೊಂಡವರಾಗಿರಬೇಕು.
ಅಂತಿಮವಾಗಿ ತಾವು ತಮಗಾಗಿ ಅಲ್ಲ ತಮ್ಮಲ್ಲಿ ಭರವಸೆಯನ್ನಿಟ್ಟು ಬರುವವರ ಸೇವೆಯನ್ನು ಮಾಡುವವರು ಎಂಬ ಮನೋಭಾವದ ಮನುಷ್ಯರಾಗಿರಬೇಕು.
- ರಾಬರ್ಟ್ ಕವನ್ರಾಗ್, ಮೈಸೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ