*ನಿರಾಶೆ ನಿರ್ನಾಮಕ್ಕೆ ಮುನ್ಸೂಚನೆ*
ನೋವು, ದುಃಖ, ಸಂಕಟ, ಭಯ, ಕಳವಳ, ಕೊರಗು, ಕೀಳರಿಮೆ, ಕೋಪ, ಒಂಟಿತನ, ಅತೃಪ್ತಿ, ಉದ್ವೇಗ, ವ್ಯಥೆಗಳಂತ ನಿರಾಶೆಗೆ ಸಂಬಂಧಪಟ್ಟ ಅಸ್ವಾಭಾವಿಕ ವರ್ತನೆಗಳು ನಮ್ಮನ್ನು ನಿರ್ನಾಮದೆಡೆಗೆ ಕೊಂಡೊಯ್ಯುವ ಮಾದಕ ವಸ್ತುಗಳಿದ್ದಂತೆ.
ನಮ್ಮ ಮಾನಸಿಕ, ಆಧ್ಯಾತ್ಮಿಕ ವೈರಿ ಮಾನುಷ ಗುಣದವನನ್ನು ಹೆಸರಿಲ್ಲದಂತೆ ಅಳಿಸಲು, ಇವುಗಳನ್ನು ತಿಳಿಯಾದ ಮನಸ್ಸಿನ್ನೊಳಗೆ ಅಘಾತಕಾರಿ ವಿಷಜಂತುವಾಗಿ ಉಲ್ಬಣಗೊಳ್ಳಲು ಬಿಡುತ್ತಾನೆ.
ಆರಂಭದಲ್ಲಿ ಸರಾಗವಾಗಿ ಸ್ವೀಕರಿಸುವ ವ್ಯಕ್ತಿ, ತನ್ನನ್ನು ತಾನು ಕಾಪಾಡಿಕೊಳ್ಳುತ್ತೇನೆ ಎಂಬ ಪೊಳ್ಳು ಭರವಸೆಯಲ್ಲಿ ಇರುತ್ತಾನೆ. ಆದರು ಅನುಮಾನಪಡುತ್ತಲೇ ಒಳಗೊಳಗೆ ಮುದುಡುತ್ತಾನೆ.
ಕ್ರಮೇಣ ವ್ಯಾಪಿಸತೊಡಗುವಾಗ ಇಂದಲ್ಲ ನಾಳೆ ತನ್ನಿಂದ ಅದು ತೊಲಗುತ್ತದೆ ಎಂದುಕೊಂಡರೂ, ಒಳಗೊಳಗೆ ಅಳುಕುತ್ತಾನೆ. ಮುಂದೆ ಒಂದು ದಿನ ಸಂಪೂರ್ಣವಾಗಿ ಆವರಿಸುವಾಗ ಕಳವಳ ಪಡುತ್ತಾನೆ.
ಅಳು, ನಿರಾಶೆ, ಅಪನಂಬಿಕೆ, ಮರೆವು, ಶೂನ್ಯತೆ, ಸಾವಿನ ಚಿಂತೆಗಳು ಅವನಲ್ಲಿ ಅಸ್ತಿತ್ವವನ್ನು ಪಡೆಯತೊಡಗುತ್ತವೆ.
* ಇದರಿಂದ ಅನೇಕರು ತಮ್ಮನ್ನೆ ತಾವು ಕಳೆದುಕೊಂಡು ಪ್ರಾಪಂಚಿಕತೆಯನ್ನು ಮರೆಯಬಹುದು.
* ಅನೇಕ ಪ್ರತಿಭಾನ್ವಿತರು ಆಸಕ್ತಿ ಕಳೆದುಕೊಂಡು ಮೌನಿ ಆಗಬಹುದು.
* ಇನ್ನೂ ಅನೇಕರು ತಮ್ಮನ್ನೇ ಈ ಲೋಕದಿಂದ ಬೇರ್ಪಡಿಸಿಕೊಳ್ಳಲು ತವಕಿಸಿ ಸೋಲಬಹುದು ಅಥವಾ ಇಲ್ಲವಾಗಿಸಿಕೊಳ್ಳಬಹುದು.
ಇವುಗಳಿಗೆಲ್ಲ ಕಾರಣ ವೈರಿ ಬೀಸುವ ಋಣಾತ್ಮಕ ಬಲೆಯೊಳಗೆ ಅರಿವಿಲ್ಲದೆ ತಮ್ಮನ್ನೇ ಬಲಿಯಾಗಿಸಿಕೊಳ್ಳುವುದು!
ಪುಣ್ಯ ಪುರುಷರು, ಸಾಧಕರು, ಮೇಧಾವಿಗಳು, ಬುದ್ದಿವಂತ ಸುಗುಣರುಗಳಂತಹ ಯಾರನ್ನೂ ಇವು ಬಿಟ್ಟಿಲ್ಲ. ಇವುಗಳನ್ನು ಜಯಿಸಿದರೆ ಮಾತ್ರವೇ ಯಶಸ್ಸು, ನೆಮ್ಮದಿ ನಮಗೆ ಕಟ್ಟಿಟ್ಟ ಬುತ್ತಿ.
ಆದ್ದರಿಂದ ಕಣ್ಣು ಮಂಜಾಗುವುದರ ಮುನ್ನ,
ಕಿವಿ ಮಂದವಾಗುವ ಮುನ್ನ,
ಶರೀರ ಚೈತನ್ಯಹೀನವಾಗುವುದರ ಮುನ್ನ,
ಜ್ಞಾನ ಕದಡಿ ಹೋಗುವ ಮುನ್ನ, ಅಭಿಮಾನ ಕಳೆದೋಗುವ ಮುನ್ನ ನಮ್ಮೊಳಗಿನ ದೃಢತೆ ಕುಂದಿ ಹೋಗುವ ಮುನ್ನ ಕೆಲ ನಿಮಿಷಗಳನ್ನಾದರೂ ನಮ್ಮನ್ನು ನಾವು ಪ್ರಸ್ತುತದಲ್ಲಿ ಅವಲೋಕಿಸಬೇಕು.
ಇಲ್ಲದಿದ್ದರೆ ನಿರಾಶೆ ನಮ್ಮನ್ನು ಬಂಧಿಸಿ ನಿರ್ನಾಮಗೊಳಿಸಬಹುದು!
ವೈದ್ಯಕೀಯದಲ್ಲಿ ಆಂತರ್ಯದ ಬೆಂಬಲವನ್ನು ಪ್ರಥಮವಾಗಿ ಪರೀಕ್ಷಿಸುತ್ತಾರೆ. ಅದು ಇದ್ದರೆ ರೋಗಿಯ ಅರ್ಧ ಕಾಯಿಲೆ ಗುಣವಾದಂತೆಯೇ ಸರಿ. ಇದಕ್ಕಾಗಿಯೇ ರೋಗಿ ಸ್ಪಂದಿಸುತ್ತಿದ್ದಾನೆ ಎಂದು ಹೇಳುವುದು.
ಹಾಗೆಯೆ ನಮ್ಮ ಮೇಲೆ ನಕರಾತ್ಮಕ ತಲ್ಲಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಅರಿವು ಮೂಡುವಾಗಲೇ ಎಚ್ಚರವಹಿಸಬೇಕು.
ಕೆಲವೊಮ್ಮೆ ನಮಗರಿವಿಲ್ಲದಿದ್ದರು ಇತರರು ಗುರುತಿಸಿರುತ್ತಾರೆ. ಅವರು ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಅದನ್ನು ಉದಾಸೀನ ಮಾಡದೆ ಅದರಿಂದ ಬಿಡಿಸಿಕೊಳ್ಳುವ ಮಾರ್ಗ ಹುಡುಕಬೇಕು.
ಹೆದರಬೇಕಾದ ಪ್ರಸಂಗವಿಲ್ಲ. ಎಲ್ಲಾ ಸಂಕಷ್ಟಗಳಿಗೂ ಪರಿಹಾರ ಇದ್ದೇಇದೆ. ಇದು ಪ್ರಕೃತಿ ನಿಯಮ.
ಇದು ದೇವರ ನಿಯಮ. ದೈವಿಕತೆ ಎಂಬುದು ಅಗೋಚರ ಶಕ್ತಿ. ವಿಶ್ವಾಸ ಇರಬೇಕು.
ಯಾವುದೇ ಕಾರಣಕ್ಕೂ ನಿರಾಶೆಗೆ ಒಳಗಾಗಬಾರದು. ಸ್ವಾಭಿಮಾನ, ಅಹಂ, ತಮಗೆ ಕುಂದು ಬರಬಹುದೆಂಬ ಚಿಂತೆ, ಹಠ, ಅತಿಯಾದ ಕರ್ತವ್ಯ ಪ್ರಜ್ಞೆಗಳಂತವುಗಳನ್ನು ತೊರೆದು ನಮ್ಮನ್ನು ನಾವು ಉಳಿಸಿಕೊಳ್ಳಲು ಅಗೋಚರ ದೇವಬಲದಲ್ಲಿ, ನಮ್ಮೊಳಗಿನ ಅಂತರಾಳದ ಸಹವಾಸದಲ್ಲಿ ವಿಶ್ವಾಸವಿಡಬೇಕು.
ಮುಖ್ಯವಾಗಿ ನಮಗೆ ದೊರಕುವ ಸಮಯವನ್ನು ಶೂನ್ಯತೆಯಲ್ಲಿ ಹರಿದಾಡಲು ಬಿಡಬಾರದು!!
ಏಕೆಂದರೆ ನಾವಿದ್ದರೇನೆ ಈ ಪ್ರಪಂಚ!!!]
- ರಾಬರ್ಟ್ ಕವನ್ರಾಗ್, ಮೈಸೂರು. -

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ