*ತಿರುಗೊ ಭೂಮಿಯಲಿ ಬದಲಾವಣೆ ಸಹಜ ಪ್ರಕ್ರಿಯೆ*
ಮುದುಡಿದ ಹೂಗಳೆಲ್ಲವೂ ಸೋಲನ್ನು ಅನುಭವಿಸಿ ಸೊರಗಿದೆ ಎನ್ನುವುದು ಖಂಡಿತ ಮೂರ್ಖತನ. ಬರಿದಾದ ಜೇನುಗೂಡಿನ ಮೇಣವು ಪ್ರಯೋಜನವಿಲ್ಲದ ಕಸದ ಗೂಡು ಎಂದು ಅಲ್ಲಗಳೆಯುವುದು ಅಜ್ಞಾನದ ದುಸ್ಥಿತಿ. ಹಾಗೆಯೇ ದುಃಖದಲ್ಲಿ ಮುಳುಗಿರುವ, ಬಡತನದಲ್ಲಿ ನಲುಗಿರುವ, ತಾನು ಯೋಗ್ಯನಲ್ಲ ಎನ್ನುವವರೆಲ್ಲಾ ಯಾವುದಕ್ಕೂ ಬಾರದವರೆಂದು ತಿರಸ್ಕಾರದಿಂದ ನೋಡುವುದು ತರವಲ್ಲ. ಅಜಾನುಬಾಹು ವ್ಯಕ್ತಿಗಳೇ ಆಗಲಿ, ಹೆಳವನೇ ಆಗಲಿ ಒಬ್ಬರಿಗೊಬ್ಬರನ್ನು ಹೋಲಿಸಿ ಅವರ ಅರ್ಹತೆಯನ್ನು ಪ್ರಕಟಪಡಿಸಲು ಅಸಾಧ್ಯ.
ಇಂದಿನ ವೈಜ್ಞಾನಿಕತೆಯ ವೇಗದ ಬದುಕಿಗೆ ಸರಿಗಟ್ಟಿ ನಿಲ್ಲಲ್ಲು ಮಾನವರಾದ ನಾವು ಮಿತಿಮೀರಿ ಸಾಹಸ ಪಡಬೇಕಾಗಿದೆ. ವ್ಯತಿರಿಕ್ತವಾಗಿ ಸಮಾಜದಲ್ಲಿ ಸಮಂಜಸವಲ್ಲದ ವಿಚಾರಗಳು ಗೋಚರಿಸುತ್ತಿವೆ.
ಈತ ಏನು ಬೇಕಾದರೂ ಸಾಧಿಸಬಲ್ಲ, ಮಾಡಬಲ್ಲ ಎಂದು ಕೆಲ ವ್ಯಕ್ತಿಗಳನ್ನು ನೋಡಿದಾಗ ಅನ್ನಿಸುತ್ತದೆ. ಆದರೆ ಅಂತಹವರ ಗುಣ, ನಡತೆ, ಬದುಕಿನ ಬಗ್ಗೆ ತಿಳಿದುಕೊಳ್ಳಲು ಹೋದಾಗ ವಿಚಿತ್ರ ಅನ್ನಿಸುತ್ತದೆ. ಕೆಲವೊಮ್ಮೆ ನೋವು, ಸಂಕಟ, ಕೋಪವೂ ಕಾಣಿಸಿಕೊಳ್ಳುತ್ತದೆ.
ಏಕೆಂದರೆ ಅವರು ಸೋಂಬೇರಿ, ಸ್ವಾರ್ಥಿ, ಭಯ, ಕೀಳರಿಮೆಗಳಿಂದ ತುಂಬಿದವರಾಗಿ ಬದುಕಿನಲ್ಲಿ ಯಶಸ್ಸನ್ನು ಕಾಣದಿರುತ್ತಾರೆ.
ಅಂಗವಿಕಲಕರು, ದೀನರು, ಬಡವರು, ನೊಂದವರು, ಕುರೂಪಿಗಳು, ಅಸಡ್ಡೆಗೆ ಒಳಗಾದವರು ನಮ್ಮ ನಡುವೆ ಅನೇಕರಿದ್ದಾರೆ.
ಅವರಲ್ಲಿ ಅನೇಕರು ಯಾರಿಗೂ ಅವಲಂಬಿತರಾಗದೆ ತಮ್ಮ ಮೇಲೆ ಅಪಾರವಾದ ನಂಬಿಕೆ ಇಟ್ಟಿರುತ್ತಾರೆ. ತಮ್ಮಲ್ಲಿರುವ ಹೀನತೆಯನ್ನು ಮರೆತು ಸ್ವಾಭಿಮಾನಿಗಳಾಗಿ ಧನಾತ್ಮಕ ಚಿಂತನೆಗಳಿಂದ ಬದುಕಲು ಪ್ರಯತ್ನಿಸುತ್ತಾರೆ.
ಸಾಮಾನ್ಯ ವ್ಯಕ್ತಿಗಳು ಸಾಧಿಸಲಾರದನ್ನು ಇಂತವರು ಸಾಧಿಸಲು ಶ್ರಮಿಸಿತ್ತಾರೆ.
ಸಾಧಿಸಿ ತೋರಿಸುತ್ತಾರೆ.
ರಾಜಕೀಯ ರಂಗದಲ್ಲೇ ಆಗಲಿ, ಸಿನಿಮಾರಂಗದಲ್ಲಿಯೇ ಆಗಲಿ, ಕಲಾರಂಗದಲ್ಲೇ ಆಗಲಿ, ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲೇ ಆಗಲಿ, ಧಾರ್ಮಿಕ ಕ್ಷೇತ್ರಗಳಲ್ಲೇ ಆಗಲಿ.... ಬುದ್ಧಿವಂತರು, ರೂಪವಂತರು, ಶಕ್ತಿವಂತರು ಮಾತ್ರವೇ ಇದ್ದಾರೆಯೇ? ಯೋಗ್ಯತೆಯೇ ಇಲ್ಲ ಎನ್ನುವವರೂ ತಾರೆಗಳಂತೆ ಮಿನುಗುತ್ತಿದ್ದಾರೆ.
ಅಂದರೆ ಪ್ರತಿಭೆ, ಚಾಣಾಕ್ಷತೆ, ಶ್ರದ್ದೆ, ಶ್ರಮ, ಏಕಾಗ್ರತೆ, ಛಲ, ಪ್ರಾಮಾಣಿಕ ಪ್ರಯತ್ನಗಳು ಸಮಾಜದಲ್ಲಿ ಎಂತಹ ವ್ಯಕ್ತಿಯನ್ನೇ ಆಗಲಿ ಒಂದು ಉತ್ತುಂಗ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಧರೆಯು ಸದಾ ತಿರುಗುತ್ತಾ ಅನೇಕ ಮಾರ್ಪಾಡಿಗೆ ಕಾರಣವಾಗುವಂತೆ ನಾವೂ ಸಹ ಸದಾ ಚಲನೆಯಲ್ಲಿದ್ದರೆ ಯಶಸ್ಸಿನ ಮೇಲ್ಮಟ್ಟಕ್ಕೆ ತಲುಪಬಹುದು.
ದೇವರ ಅನುಗ್ರಹ ಸದಾ ಇದೆ.
- ರಾಬರ್ಟ್ ಕವನ್ರಾಗ್, ಮೈಸೂರು -


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ